ಇಂದು (ಭಾನುವಾರ) ದೇಶಾದ್ಯಂತ ರಂಜಾನ್ ಉಪವಾಸ ಆರಂಭಗೊಂಡಿದೆ. ರಾಜ್ಯದ ಕೆಲವೆಡೆ ಚಂದ್ರ ದರ್ಶನವಾದ ಹಿನ್ನಲೆಯಲ್ಲಿ ಇಂದಿನಿಂದ ರಾಜ್ಯಾದ್ಯಂತ ರಂಜಾನ್ ಉಪವಾಸ ವ್ರತ ಆಚರಣೆ ಆರಂಭಗೊಳ್ಳಲಿದೆ ಎಂದು ಮುಸ್ಲಿಂ ಸಮುದಾಯದ ಮುಖಂಡರು ತಿಳಿಸಿದ್ದಾರೆ.
ಝೀನತ್ ಬಕ್ಷತ್ ಕೇಂದ್ರ ಜಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಆಗಿರುವಂತ ಎಸ್‌ಎಂ ರಶೀದ್ ಮಾಹಿತಿ ಹಂಚಿಕೊಂಡಿದ್ದಾರೆ. ಕರಾವಳಿಯಲ್ಲಿ ಚಂದ್ರನ ದರ್ಶನವಾಗಿದೆ. ಹೀಗಾಗಿ ಕರಾವಳಿಯಲ್ಲಿ ಇಂದಿನಿಂದ ರಂಜಾನ್ ಮಾಸ ಆರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಕರಾವಳಿಯಲ್ಲಿ ಇಂದಿನಿಂದ ರಂಜಾನ್ ವ್ರತ ಆರಂಭಗೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿಯಲ್ಲಿ ರಂಜಾನ್ ಉಪವಾಸ ವ್ರತವನ್ನು ಆಚರಣೆ ಮಾಡುವುದಾಗಿ ಮಾಹಿತಿ ನೀಡಿದ್ದಾರೆ.

ಬೆಳಗಿನ ಜಾವವೇ ಊಟೋಪಚಾರವನ್ನು ಮುಗಿಸಿದ ಮುಸ್ಲಿಂ ಬಾಂಧವರು ಒಂದು ತಿಂಗಳ ಉಪವಾಸ ಕೈಗೊಳ್ಳಲಿದ್ದಾರೆ. ಇಂದು ಮುಂಜಾನೆಯೇ ಮಸೀದಿಗೆ ಹೋಗಿ ನಮಾಜ್ ಮಾಡಿಬಂದರು. ಕೆಲವರು ಮನೆಗಳಲ್ಲಿಯೇ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.
ಕೆಲವು ದೇಶಗಳಲ್ಲಿ ನಿನ್ನೆ ರಂಜಾನ್ ಉಪವಾಸ ಶುರುವಾದರೆ, ಭಾರತದಲ್ಲಿ ಮಾತ್ರ ಒಂದು ದಿನ ತಡವಾಗಿ ಶುರುವಾಗಿದೆ. ಮಾರ್ಚ್ 2ರಿಂದ ಆರಂಭವಾಗಿ 31ರವರೆಗೆ ಇರಲಿದೆ ಎಂಬುದು ಮುಸ್ಲಿಂ ಧರ್ಮಗುರುಗಳ ವಿವರಣೆಯಾಗಿದೆ.
ಹೇಗಿರುತ್ತದೆ ರಂಜಾನ್ ಉಪವಾಸ : ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರು ಬೆಳಗ್ಗೆ 5.20ರೊಳಗೆ ಆಹಾರ ಸೇವನೆ ಮುಗಿಸಿ ನಂತರ ಧಾರ್ಮಿಕ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳಬೇಕು. ನಂತರ ಉಪವಾಸ ಆರಂಭವಾದರೆ ಸಂಜೆ 6.30ಕ್ಕೆ ಸೂರ್ಯಾಸ್ತ ನಂತರ ಮುಕ್ತಾಯವಾಗುತ್ತದೆ. ಸೂರ್ಯಾಸ್ತ ನಂತರ ಮತ್ತೆ ಧಾರ್ಮಿಕ ಪೂಜೆ ನಡೆಸಿ ಆಹಾರ ಸೇವನೆ ಇರುತ್ತದೆ. ಇಫ್ತಿಯಾರ್ ಕೂಟಗಳನ್ನು ರಾಜಕೀಯ ನಾಯಕರು, ಗಣ್ಯರು ಈ ತಿಂಗಳು ಆಯೋಜಿಸುತ್ತಿರುತ್ತಾರೆ. ರಾತ್ರಿ ವೇಳೆಯಲ್ಲಿಯೂ ಪ್ರಾರ್ಥನೆ ಸಲ್ಲಿಸುತ್ತಾರೆ. ಇದಕ್ಕೆ ಮುಸಲ್ಮಾನರು ರೋಜಾ ಎಂದು ಕರೆಯುತ್ತಾರೆ. ರಂಜಾನ್ ಮಾಸದಲ್ಲಿ ಮುಸ್ಲಿಂ ನಿಯಮಗಳನ್ನು ಶಿಸ್ತಿನಿಂದ ಪಾಲಿಸಿದರೆ ಪಾಪಗಳಿಂದ ಮೋಕ್ಷ ಸಿಗುವುದು, ಅಲ್ಲಾನ ಕೃಪೆಗೆ ಪಾತ್ರರಾಗುತ್ತೇವೆ ಎಂಬ ನಂಬಿಕೆಯಾಗಿದೆ.