ಡೆಹ್ರಾಡೂನ್ : ಉತ್ತರಾಖಂಡದ ಚಮೋಲಿಯ ಹಿಮಕುಸಿತ ಸ್ಥಳದಲ್ಲಿ ಮತ್ತೊಬ್ಬ ಕಾರ್ಮಿಕನ ಮೃತದೇಹ ಪತ್ತೆಯಾಗಿದ್ದು, ಮೃತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಇನ್ನುಳಿದ ಮೂವರಿಗಾಗಿ ಶೋಧ ಮುಂದುವರಿದಿದೆ. ವಿಶೇಷ ರೆಕೊ ರಾಡಾರ್‌ಗಳು, ಡ್ರೋನ್ ಮತ್ತು ಹಿಮಪಾತ ರಕ್ಷಣಾ ಶ್ವಾನಗಳನ್ನ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
ನಿನ್ನೆ ಮೃತಪಟ್ಟಿದ್ದ ನಾಲ್ವರು ಕಾರ್ಮಿಕರು ಜೋಶಿಮಠದ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಹಿಮದಡಿ ಒಟ್ಟು 55 ಕಾರ್ಮಿಕರು ಸಿಲುಕಿದ್ದರು. ಬಾಕಿ ಇರುವ ನಾಲ್ವರಿಗಾಗಿ ಇಂದು ಶೋಧ ನಡೆಸಲಾಗುತ್ತಿತ್ತು, ಈ ವೇಳೆ ಓರ್ವ ಕಾರ್ಮಿಕನ ಮೃತದೇಹ ಪತ್ತೆಯಾಗಿದೆ.
ಹಿಮಕುಸಿತ ಪ್ರದೇಶದಲ್ಲಿ ಭಾರತೀಯ ಸೇನೆ, ವಾಯುಪಡೆ, ಇಂಡೋ ಟಿಬೆಟಿಯನ್ ಗಡಿ ಪೊಲೀಸ್, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ. ಶುಕ್ರವಾರ 33, ಶನಿವಾರ 17 ಕಾರ್ಮಿಕರನ್ನು ರಕ್ಷಣೆ ಮಾಡಲಾಗಿದೆ.
ಒಂದೆಡೆ ಹಿಮ ಮತ್ತೊಂದೆಡೆ ಭಾರೀ ಮಳೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹೀಗಾಗಿ ಕಳೆದ ಎರಡೂ ದಿನ ರಾತ್ರಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ವಿವಿಧ ರಕ್ಷಣಾ ತಂಡಗಳೊಂದಿಗೆ ಅಗ್ನಿಶಾಮಕ ದಳದ 200ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ.
ಉಳಿದ ಮೂವರು ಕಾರ್ಮಿಕರ ರಕ್ಷಣೆಗೆ ಹರಸಾಹಸ ನಡೆಸುತ್ತಿರುವ ಅಧಿಕಾರಿಗಳು ವಿಶೇಷ ರೆಕೊ ರಾಡಾರ್‌ಗಳು, ಡ್ರೋನ್‌ಗಳು ಮತ್ತು ಹಿಮಪಾತ ರಕ್ಷಣಾ ಶ್ವಾನಗಳನ್ನ ಬಳಸಿಕೊಂಡಿದ್ದಾರೆ. ಇಂದು ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ, ಹಿಮಕುಸಿತ ಪ್ರದೇಶಗಳನ್ನ ವೈಮಾನಿಕ ಸಮೀಕ್ಷೆ ಮೂಲಕ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ರಕ್ಷಣಾ ಕಾರ್ಯಾಚರಣೆಯ ಬಗ್ಗೆ ಮಾಹಿತಿಯನ್ನೂ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.