ನವದೆಹಲಿ : ಮೊದಲ ಬಾರಿಗೆ ಭಾರತ ಮ್ಯಾಕ್ಬುಕ್, ಏರ್ಪಾಡ್, ವಾಚ್, ಪೆನ್ಸಿಲ್ ಮತ್ತು ಐಫೋನ್ಗಳಂತಹ ಆಪಲ್ ಉತ್ಪನ್ನಗಳನ್ನು ತಯಾರಿಸಲು ಚೀನಾ ಮತ್ತು ವಿಯೆಟ್ನಾಂಗೆ ಎಲೆಕ್ಟ್ರಾನಿಕ್ ಭಾಗಗಳನ್ನು ರಫ್ತು ಮಾಡಲು ಆರಂಭಿಸಿದೆ.
ಆಪಲ್ ಪೂರೈಕೆದಾರರಾದ ಮದರ್ಸನ್ ಗ್ರೂಪ್, ಜಬಿಲ್, ಆಕ್ವಸ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಭಾರತದಲ್ಲಿ ಐಪ್ಯಾಡ್ಗಳನ್ನು ಹೊರತುಪಡಿಸಿ ತನ್ನ ಎಲ್ಲಾ ಉತ್ಪನ್ನಗಳಿಗೆ ಈಗ ಭಾರತದಲ್ಲೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸಲು ಆರಂಭಿಸಿದೆ.
ಇಲ್ಲಿಯವರೆಗೆ ಭಾರತ ಚೀನಾ ಮತ್ತು ವಿಯೆಟ್ನಾಂದಿಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಆಮದು ಮಾಡಿ ಬಳಿಕ ಜೋಡಣೆ ಮಾಡುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ವಸ್ತುಗಳನ್ನು ರಫ್ತು ಮಾಡುವ ಬೆಳವಣಿಗೆಯಾಗಿದೆ. ಮೇಕ್ ಇನ್ ಇಂಡಿಯಾ ಯೋಜನೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, 2030 ರ ವೇಳೆಗೆ ಭಾರತ 35-40 ಬಿಲಿಯನ್ ಡಾಲರ್ ಮೌಲ್ಯದ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಹಾಕಿಕೊಂಡಿದೆ.
ಮೆಕ್ಯಾನಿಕ್ಸ್ ಎಂಬುದು ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಮದರ್ಬೋರ್ಡ್, ಕೇಂದ್ರ ಸಂಸ್ಕರಣಾ ಘಟಕ ಮತ್ತು ಇತರ ಉಪ-ಅಸೆಂಬ್ಲಿಗಳನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಘಟಕಗಳಾಗಿವೆ. ಈ ಘಟಕಗಳ ತಯಾರಿಕೆಯು ಸಂಕೀರ್ಣ ಎಂಜಿನಿಯರಿಂಗ್ ಅನ್ನು ಒಳಗೊಂಡಿರುತ್ತದೆ ಮತ್ತು ಹೈಟೆಕ್ ಯಂತ್ರಗಳ ಅಗತ್ಯವಿರುತ್ತದೆ.
ಆಪಲ್ ಪ್ರಸ್ತುತ ಭಾರತದಲ್ಲಿ ಐಫೋನ್ಗಳನ್ನು ಮಾತ್ರ ತಯಾರಿಸುತ್ತದೆ ಮತ್ತು ಶೀಘ್ರದಲ್ಲೇ ಇಲ್ಲಿ ಏರ್ಪಾಡ್ಗಳ ಉತ್ಪಾದನೆಯನ್ನು ಪ್ರಾರಂಭಿಸಲಿದೆ.
ಭಾರತದಲ್ಲಿ ತಯಾರಾದ ಆಪಲ್ ಐಫೋನ್ಗಳು ಈಗ ವಿದೇಶಗಳಿಗೂ ರಫ್ತು ಆಗುತ್ತಿದೆ. ಏಪ್ರಿಲ್ 2024 ರಿಂದ ಜನವರಿ 2025 ರ ಅವಧಿಯಲ್ಲಿ ಆಪಲ್ 1 ಲಕ್ಷ ಕೋಟಿ ರೂ. ಮೌಲ್ಯದ ಐಫೋನ್ಗಳನ್ನು ಮಾರಾಟ ಮಾಡಿತ್ತು. ಈ ಹಿಂದಿನ ಈ ಅವಧಿಯಲ್ಲಿ ಆಪಲ್ 76,000 ಕೋಟಿ ರೂ. ಮೌಲ್ಯದ ಫೋನ್ಗಳನ್ನು ರಫ್ತು ಮಾಡಿತ್ತು ಎನ್ನಲಾಗಿದೆ.