ಬಳ್ಳಾರಿ : ಫೆ.28 ರಿಂದ ಮಾ.2ರವರೆಗೆ ಮೂರು ದಿನಗಳ ಕಾಲ ಅಪಾರ ಜನಸಾಗರದ ನಡುವೆ ಜರುಗಿದ ವಿಜಯನಗರದ ಗತವೈಭವ ಸಾರುವ ಐತಿಹಾಸಿಕ ಹಂಪಿ ಉತ್ಸವಕ್ಕೆ ವಿದ್ಯುಕ್ತ ತೆರೆ ಬಿದ್ದಿದೆ. ಹಂಪಿ ಉತ್ಸವವನ್ನು ಜನೋತ್ಸವವಾಗಿಸುವಲ್ಲಿ ವಿಜಯನಗರ ಜಿಲ್ಲಾಡಳಿತ ಸಾಫಲ್ಯ ಕಂಡಿದೆ. ಬಿರುಬಿಸಿಲು ಲೆಕ್ಕಿಸದೇ ಲಕ್ಷಾಂತರ ಸಂಖ್ಯೆಯ ಜನ ಉತ್ಸವಕ್ಕೆ ಹರಿದು ಬಂದಿದ್ದರು.
ವಿಜಯನಗರ ಶಾಸಕ ಹೆಚ್.ಆರ್.ಗವಿಯಪ್ಪ ನೇತೃತ್ವದಲ್ಲಿ ಜನವರಿ ಇಂದಲೇ ಉತ್ಸವದ ಸಿದ್ಧತೆಯನ್ನು ಜಿಲ್ಲಾಡಳಿತ ಆರಂಭಿಸಿತ್ತು. ಉತ್ಸವದ ಯಶಸ್ವಿ ಆಯೋಜನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಸ್ವಾಗತ, ಶಿಷ್ಠಾಚಾರ, ಕಲಾವಿದರ ಆಯ್ಕೆ, ಸಾರಿಗೆ, ವಸತಿ, ಆಹಾರ, ಪ್ರಚಾರ, ಜಾಹೀರಾತು ಮತ್ತು ಮಾಧ್ಯಮ ಸಮನ್ವಯ, ಹಣಕಾಸು, ವೇದಿಕೆ, ಕುಡಿಯುವ ನೀರು, ಆರೋಗ್ಯ ಮತ್ತು ನೈರ್ಮಲೀಕರಣ, ವಸ್ತು, ಕೃಷಿ, ಫಲಪುಷ್ಪ ಪ್ರದರ್ಶನ, ಕಾನೂನು ಸುವ್ಯವಸ್ಥೆ, ಕ್ರೀಡೆ, ವಿಚಾರ ಸಂಕಿರಣ, ಕವಿಗೋಷ್ಠಿ, ಎತ್ತು, ಕುರಿ, ಶ್ವಾನ ಸ್ಪರ್ಧೆ, ತುಂಗಾರತಿ, ವಸಂತ ವೈಭವ, ಜಾನಪದ ವಾಹಿನಿ, ಹಂಪಿ ಬೈಸ್ಕೈ (ಆಗಸದಿಂದ ಹಂಪಿ) ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ 20ಕ್ಕೂ ಹೆಚ್ಚು ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು.

ಮುಂಜಾಗೃತವಾಗಿ ಅಗತ್ಯ ಪೂರ್ವ ತಯಾರಿ, ಸಂಪನ್ಮೂಲ ಹಾಗೂ ಸಿಬ್ಬಂದಿ ಕ್ರೂಢೀಕರಣ ಮಾಡಿಕೊಂಡು ಉತ್ಸವದ ಆಯೋಜನೆಗೆ ಅಣಿಯಾಗಿತ್ತು. ಉತ್ಸವದ ಆಯೋಜನೆಯ ನಡುವೆಯೇ ಜಿಲ್ಲಾಡಳಿತಕ್ಕೆ ಮೈಲಾರ, ಕೊಟ್ಟೂರು, ಕುರುವತ್ತಿಯಂತಹ ಜಾತ್ರಾ ಮಹೋತ್ಸವ, ಗುಡೇಕೋಟೆ ಉತ್ಸವಗಳನ್ನು ಆಯೋಜಿಸಿ ಯಶಸ್ವಿಯಾಗಿ ಪೂರ್ಣಗೊಳಿಸುವ ಒತ್ತಡವಿತ್ತು. ತಿಂಗಳ ಕಾಲ ಅಧಿಕಾರಿಗಳು ಹಗಲಿರುಳು ದಣಿವರೆಯದೇ ದುಡಿದಿದ್ದಾರೆ.
ಉತ್ಸವದಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ಪ್ರತಿ ವೇದಿಕೆ, ತಾತ್ಕಾಲಿಕ ಬಸ್ ನಿಲ್ದಾಣ, ವಸ್ತುಪ್ರದರ್ಶನ ಸ್ಥಳದಲ್ಲಿ ಸಂಚಾರಿ ಶೌಚಾಲಯಗಳನ್ನು ಇರಿಸಲಾಗಿತ್ತು. ಉತ್ಸವದಲ್ಲಿ ಸ್ವಚ್ಚತೆಗಾಗಿಯೇ 400ಕ್ಕೂ ಹೆಚ್ಚು ಪೌರಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಹೊಸಪೇಟೆ ನಗರ ಸಭೆ ಸೇರಿದಂತೆ ಕಮಲಾಪುರ, ಮರಿಯಮ್ಮನಹಳ್ಳಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ಸ್ಥಳೀಯ ಸಂಸ್ಥೆಗಳಿಂದ ಸ್ವಚ್ಚತಾ ಸೇನಾನಿಗಳು ನಿತ್ಯ ಸ್ವಚ್ಛತೆಗಾಗಿ ಶ್ರಮಿಸಿದರು.
ಉತ್ಸವ ಮೂರು ದಿನಗಳ ಕಾಲ ಹಂಪಿ ಗ್ರಾಮ ಹಾಗೂ ವೇದಿಕೆ ಬಳಿ ಹೊಸಪೇಟೆ ನಗರಸಭೆ ವತಿಯಿಂದ ಸೊಳ್ಳೆ ನಿಯಂತ್ರಣಕ್ಕಾಗಿ ಫಾಗಿಂಗ್ ಮಾಡಲಾಗಿತ್ತು. ಒಟ್ಟಾರೆ ಎಲ್ಲಾ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನಃಪೂರ್ವಕವಾಗಿ ಉತ್ಸವದ ಯಶಸ್ವಿಗೆ ಕರ್ತವ್ಯ ನಿರ್ವಹಿಸಿದರು. 2025ರ ಹಂಪಿ ಉತ್ಸವ ಜನೋತ್ಸವವಾಗಿ ಯಶಸ್ವಿಯಾಗಿ ಸಂಪನ್ನಗೊಂಡಿದೆ ಎಂದು ಹೇಳಲಾಗಿದೆ.