ಬೆಂಗಳೂರು : ಕರ್ನಾಟಕ ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಮತ್ತು ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಿದರು.
ಇದಕ್ಕೂ ಮುನ್ನ ವಿಧಾನಸೌಧದ ಗ್ರ್ಯಾಂಡ್ ಸ್ಟೆಪ್ ಬಳಿ ಸಿಎಂ ಸಿದ್ದರಾಮಯ್ಯ ಅವರು ರಾಜ್ಯಪಾಲರನ್ನು ಸ್ವಾಗತಿಸಿದರು. ಈ ವೇಳೆ ಸ್ಪೀಕರ್ ಯು.ಟಿ ಖಾದರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಅಧಿವೇಶನ ಆರಂಭದಲ್ಲಿ ರಾಜ್ಯಪಾಲರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳನ್ನುದ್ದೇಶಿಸಿ ಮಾತನಾಡಿದರು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು.
ಸರ್ಕಾರ ಬಂದಾಗಿನಿಂದ ಗ್ಯಾರಂಟಿ ಯೋಜನೆಗಳಿಗೆ 70,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವರ್ಷಕ್ಕೆ 90,000 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ. ಸರ್ಕಾರ ಅಭಿವೃದ್ಧಿ ವೇಗ ಸದೃಢಗೊಳಿಸಿದೆ. ಆಡಳಿತ ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವ ಅವಕಾಶವಾಗಿ ಬಳಕೆಗೆ ಬದ್ಧವಾಗಿದೆ ಎಂದು ವಿವರಿಸಿದರು.

ಕಳೆದ ಬಜೆಟ್‌ನಲ್ಲಿ ಮಾಡಿದ್ದ 334 ಘೋಷಣೆಗಳ ಪೈಕಿ 331 ಘೋಷಣೆಗಳಿಗೆ ಸರ್ಕಾರಿ ಆದೇಶ ಆಗಿದೆ. ಸಾಮಾಜಿಕ ಪಿಂಚಣಿ ಯೋಜನೆ ಸೇರಿ ನೇರ ನಗದು – ಸಬ್ಸಿಡಿ ಪ್ರೋತ್ಸಾಹದಿಂದ 1.25 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಅನುಕೂಲ ಆಗಿದೆ. 13 ಸಾವಿರ ಶಿಕ್ಷಕರ ನೇಮಕ ಮಾಡಿಕೊಳ್ಳಲಾಗಿದೆ. ಉನ್ನತ ಶಿಕ್ಷಣದಲ್ಲಿ 1,088 ಸಹಾಯಕ ಪ್ರಾಧ್ಯಾಪಕರ ನೇಮಕ ಮಾಡಲಾಗಿದೆ. 8,311 ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ವಿವೇಕ ಯೋಜನೆ ಅಡಿ ಮತ್ತು ವಿಶೇಷ ಯೋಜನೆ ಅಡಿ 5,349 ಶಾಲಾ ಕೊಠಡಿಗಳು ಪೂರ್ಣಗೊಂಡಿವೆ. 784 ಕೊಠಡಿಗಳ ಕಾಮಗಾರಿ ಪ್ರಗತಿಯಲ್ಲಿವೆ. 522 ಕೆಪಿಎಸ್ ಶಾಲೆಗಳ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗಿದೆ. 1,953 ಸರ್ಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸಮಸ್ಯೆ ಇಲ್ಲ ಎಂದು ಭಾಷಣದಲ್ಲಿ ಪ್ರಸ್ತಾಪಿಸಿದರು.
ಇದೇ ವೇಳೆ ಪ್ರತಿಪಕ್ಷಗಳ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆರೋಪಕ್ಕೆ ರಾಜ್ಯಪಾಲರ ಭಾಷಣದ ಮೂಲಕ ಸರ್ಕಾರ ತಿರುಗೇಟು ನೀಡಿತು. ಕಳೆದ 19 ತಿಂಗಳಲ್ಲಿ ಗಂಭೀರವಾದ ಕಾನೂನು ಸುವ್ಯವಸ್ಥೆ ಸಮಸ್ಯೆಗಳೇನು ಉದ್ಭವಿಸಿಲ್ಲ. ಪೊಲೀಸ್ ಠಾಣೆಗಳು ಜನಸ್ನೇಹಿಯಾಗಿ ಕೆಲಸ ಮಾಡುತ್ತಿವೆ. ಇತ್ತೀಚಿನ ದಿನಗಳಲ್ಲಿ ಇಡೀ ದೇಶದಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜ್ಯ ಪೊಲೀಸ್ ಇಲಾಖೆಯು ನಿರಂತರವಾಗಿ ಜಾಗೃತಿ ಮೂಡಿಸಿ ಅಪರಾಧಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚುವ ಕೆಲಸ ಮಾಡುತ್ತಿ. ಹಾಗಾಗಿ ಈ ಪ್ರಕರಣಗಳಲ್ಲೂ ಇಳಿಕೆ ಕಾಣುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಹಾಲಿನ ಉತ್ಪಾದನೆಯಲ್ಲಿ ರಾಜ್ಯ ದಾಖಲೆ ಬರೆದಿದೆ. ದಿನಕ್ಕೆ ಕೆಎಂಎಫ್ 1 ಕೋಟಿ ಲೀಟರ್ ಹಾಲು ಸಂಗ್ರಹ ಮಾಡುತ್ತಿದ್ದು, ಇದುವರೆಗೆ ಪಶು ಪಾಲಕರಿಗೆ 1,500 ಕೋಟಿ ಪ್ರೋತ್ಸಾಹ ಧನ ನೀಡಿದೆ. ಪ್ರಸಕ್ತ ಸಾಲಿನಲ್ಲಿ 24,934 ರಾಸುಗಳಿಗೆ, 33,373 ಕುರಿ, ಮೇಕೆಗಳಿಗೆ 26.60 ಕೋಟಿ ಪ್ರೋತ್ಸಾಹ ಧನ ನೀಡಿದೆ ಎಂದರಲ್ಲದೇ ಸರ್ಕಾರ ಆರ್ಥಿಕ ಶಿಸ್ತು ಕಾಯ್ದುಕೊಂಡಿದೆ ಅಂತ ಶ್ಲಾಘಿಸಿದರು.
ಜನವರಿ 17ರ ವರೆಗೆ ಶಕ್ತಿ ಯೋಜನೆ ಅಡಿಯಲ್ಲಿ 376.70 ಕೋಟಿ ಮಹಿಳೆಯರು ಸಂಚಾರ ಮಾಡಿದ್ದಾರೆ. ಶಕ್ತಿ ಯೋಜನೆಗೆ ಸರ್ಕಾರದಿಂದ ಇದುವರೆಗೆ 8,215 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. 2024-25ರ ಬಜೆಟ್‌ನಲ್ಲಿ ನಮ್ಮ ಸರ್ಕಾರ ಶೇ.15.01 ರಷ್ಟು ಸಂಪತ್ತನ್ನು ಬಂಡವಾಳ ವೆಚ್ಚಗಳಿಗಾಗಿ ವಿನಿಯೋಗ ಮಾಡಲಾಗಿದೆ. ಡಿಸೆಂಬರ್ ಅಂತ್ಯದ ವರೆಗೆ 1,81,908 ಕೋಟಿ ರೂ. ರಾಜಸ್ವ ಸಂಗ್ರಹಮಾಡಿದೆ.
ರಾಜ್ಯದ ರೈತ ಮತ್ತು ರೈತ ಉತ್ಪಾದಕರ ಸಂಸ್ಥೆಯಿಂದ ಉತ್ಪಾದನೆಯಾಗುವ ಜೇನುತುಪ್ಪಕ್ಕೆ ʻಝೇಂಕಾರ್ʼ ಹೆಸರಿನ ವಿಶೇಷ ರೂಪಿಸಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗಿದೆ. ಜನವರ ಅಂತ್ಯಕ್ಕೆ 20.22 ಲಕ್ಷ ರೈತರಿಗೆ 16,942 ಕೋಟಿ ರೂ. ಬೆಳೆ ಸಾಲ ಮತ್ತು 46,000 ರೈತರಿಗೆ 1,442 ಕೋಟಿ ರೂ. ಮಧ್ಯಮ, ದೀರ್ಘಾವಧಿಯ ಕೃಷಿ ಸಾಲ ವಿತರಣೆ ಮಾಡಲಾಗಿದೆ. ಸಹಕಾರ ಸಂಘಗಳಿಗೆ ಬಡ್ಡಿ ಸಹಾಯ ಧನ ನೀಡಲು 1,451 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.