ಬೆಂಗಳೂರು : ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಎಂದು ವೀರಪ್ಪ ಮೊಯ್ಲಿ ಹೇಳಿದಾಗ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತ ಖುಷಿ ಡಿಕೆಶಿ ಮೊಗದಲ್ಲಿ ಇತ್ತು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಲೇವಡಿ ಮಾಡಿದರು.

ಮಾಜಿ ಸಿಎಂ ವೀರಪ್ಪ ಮೊಯ್ಲಿ ಹೇಳಿಕೆ ಕುರಿತು ಮಾಧ್ಯಮದರೊಂದಿಗೆ ಪ್ರತಿಕ್ರಿಯಿಸಿದ ಅವರು, ನಾನೂ ಕೂಡಾ ಮೊಯ್ಲಿಯವರ ಅಬ್ಬರದ ಭಾಷಣ ನೋಡಿದೆ. ಡಿಕೆಶಿ ಸಿಎಂ ಆಗೋದನ್ನು ಯಾರಿಂದಲೂ ತಪ್ಪಿಸಲು ಆಗಲ್ಲ ಅಂದಿದ್ದಾರೆ. ಆಗ ಡಿಕೆಶಿ ಮೊಗದಲ್ಲಿ ಹಾಲಿನ ಮಳೆಯೋ, ಜೇನಿನ ಹೊಳೆಯೋ ಎನ್ನುವಂತಹ ಖುಷಿ ಇತ್ತು ಎಂದರು.

ಇದು ಸಿದ್ದರಾಮಯ್ಯ ಅವರ ಲಾಸ್ಟ್ ಬಜೆಟ್ ಆಗಬಹುದು. ಲಾಸ್ಟ್ ಆದರೂ ಲೀಸ್ಟ್ ಅಲ್ಲ. ಅತೀ ಹೆಚ್ಚು ಸಾಲಮಾಡಿ ಡಿಕೆಶಿಗೆ ಬಿಟ್ಟು ಹೋಗಬಹುದು. ಸಿದ್ದರಾಮಯ್ಯ ಇರುತ್ತಾರೋ, ಹೋಗುತ್ತಾರೆ ಎನ್ನುವ ಎಪಿಸೋಡ್ ಕಳೆದ 2 ವರ್ಷಗಳಿಂದ ನಡೆಯುತ್ತಲೇ ಇದೆ ಎಂದು ಹೇಳಿದರು.

ಮೊಯ್ಲಿಯವರು ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಆಗಿದ್ದವರು. ಅವರಿಗೆ ಪವರ್ ಶೇರ್ ಒಪ್ಪಂದದ ಬಗ್ಗೆ ಗೊತ್ತಿದೆ. ಹಾಗಾಗಿ ಧೈರ್ಯವಾಗಿ ಮೊಯ್ಲಿ ಹಾಗೆ ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ನಾನೇ ಸಿಎಂ ಅಂತಿದ್ದಾರೆ. ನಾವು ಮಾತನಾಡಿದರೆ ಜಾತಕ ಹೇಳುತ್ತಾರೆ. ಹಾಗಾದರೆ ಶನಿಬಲ, ಗುರುಬಲ ಯಾಕೆ ಕೇಳುತ್ತಾರೆ. ಕೋಡಿ ಮಠದ ಸ್ವಾಮೀಜಿ ಸಹ ಸಿದ್ದರಾಮಯ್ಯ ಸುಲಭಕ್ಕೆ ಅಧಿಕಾರ ಕೊಡಲ್ಲ ಅಂದಿದ್ದಾರೆ.

ನಾನು, ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಾ ಅಂತ ಹೇಳಿದ್ದಕ್ಕೂ ಕೋಡಿಮಠದ ಸ್ವಾಮೀಜಿ ಹೇಳಿಕೆಗೂ, ಮೊಯ್ಲಿ ಹೇಳಿಕೆಗೂ ತಾಳೆ ಆಯ್ತಲ್ಲ. ಸಿಎಂ ಸ್ಥಾನ ಸಾಕಪ್ಪ ಅಂತ ಖುದ್ದು ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಹೋಗುವಂತೆ ಡಿಕೆಶಿ ಮಾಡುತ್ತಾರೆ ಎಂದರು.

Leave a Reply

Your email address will not be published. Required fields are marked *