ಲಕ್ನೋ : ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಹಾಕುಂಭ ಆಯೋಜನೆಯ ಕುರಿತು ಸಮಾಜವಾದಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಮಾತನಾಡಿದ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು, ಕರ್ನಾಟಕದ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿಕೆಯನ್ನು ಉಲ್ಲೇಖಿಸಿ ಅಖಿಲೇಶ್ ಯಾದವ್ ಅವರನ್ನು ತೀವ್ರ ತರಾಟೆಗೆ ತಗೆದುಕೊಂಡಿದ್ದಾರೆ.

ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ಅನೇಕ ನಾಯಕರು ಮಹಾಕುಂಭ ಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡಿ, ಆದರ ಆಯೋಜನೆಯ ಕುರಿತು ಶ್ಲಾಘಿಸಿ ಮಾತನಾಡಿದ್ದಾರೆ. ಆದರೆ, ನೀವೂ ಅಖಿಲೇಶ್ ಯಾದವ್ ಸಹ ಅಲ್ಲಿಗೆ ಹೋಗಿದ್ದೀರಿ. ಅದು ನಿಮ್ಮ ನಂಬಿಕೆ. ಆದರೆ ಚಿಕ್ಕಪ್ಪ ಹೋಗಲು ಸಾಧ್ಯವಾಗಲಿಲ್ಲ. ಆದ್ದರಿಂದ ನೀವು ನಿಮ್ಮ ಚಿಕ್ಕಪ್ಪ ಶಿವಪಾಲ್ ಸಿಂಗ್ ಯಾದವ್ ಅವರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆ ನೀಡಿದ್ದೀರಾ ಎಂದು ಕಿಡಿಕಾರಿದರು.

45 ದಿನದಲ್ಲಿ 66.30 ಕೋಟಿ ಭಕ್ತರು ತ್ರಿವೇಣಿ ಸಂಗಮದಲ್ಲಿ ಮಿಂದೆದಿದ್ದಾರೆ. ಮಹಾಕುಂಭಮೇಳದಲ್ಲಿ ಮೂರೂವರೆ ಲಕ್ಷ ಕೋಟಿ ರೂಪಾಯಿಯ ವಹಿವಾಟು ನಡೆದಿದೆ. 130 ದೋಣಿಗಳ ನಾವಿಕರು 30 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ. ಕುಂಭಮೇಳದ ಅಚ್ಚುಕಟ್ಟು ವ್ಯವಸ್ಥೆ ಬಗ್ಗೆ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್, ನನಗೆ ಕರೆ ಮಾಡಿ ಶ್ಲಾಘಿಸಿದ್ದಾರೆ ಎಂದು ಸದನಕ್ಕೆ ಸಿಎಂ ಯೋಗಿ ಮಾಹಿತಿ ನೀಡಿದ್ದಾರೆ.

ಮಹಾಶಿವರಾತ್ರಿಯ ದಿನ ಮಾತನಾಡಿದ ಡಿಕೆಶಿ, ಮಹಾ ಕುಂಭಮೇಳದಲ್ಲಿ ನನ್ನ ಅನುಭವ ಅತ್ಯುತ್ತಮವಾಗಿತ್ತು. ಮಹಾ ಕುಂಭಮೇಳದ ಆಯೋಜನೆಯನ್ನು ನಾನು ಸ್ವಾಗತಿಸುತ್ತೇನೆ. ಇದು ಸಾಮಾನ್ಯವಾದ ಕೆಲಸವಲ್ಲ. ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರನ್ನು ನಿಭಾಯಿಸುವುದು ಸುಲಭವಲ್ಲ. ಒಂದೆರಡು ಸಣ್ಣಪುಟ್ಟ ತೊಂದರೆಗಳು ಆಗಿರಬಹುದು. ತಪ್ಪು ಹುಡುಕಲು ಹೋಗುವುದಿಲ್ಲ. ಧರ್ಮದಲ್ಲಿ ಭಕ್ತ ಹಾಗೂ ಭಗವಂತನ ನಡುವೆ ಸಂಬಂಧವಿರುತ್ತದೆ ಎಂದು ಹೇಳಿದರು.

Leave a Reply

Your email address will not be published. Required fields are marked *