ಬೆಂಗಳೂರು : ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ 4% ಮೀಸಲಾತಿಗೆ ಮರುಜೀವ ಬಂದಿದೆ. ನವೆಂಬರ್‌ನಲ್ಲಿ ಪ್ರಸ್ತಾಪವಾಗಿ ವ್ಯಾಪಕ ವಿರೋಧದ ಬಳಿಕ ಸರ್ಕಾರ ಹಿಂದೆ ಸರಿದಿತ್ತು. ಆದರೆ ಈಗ ಸರ್ಕಾರ ಮತ್ತೆ ಮೀಸಲಾತಿಗೆ ಜೀವ ಕೊಡುತ್ತಿದೆ. ಇಂದು ಸಂಜೆ ಕ್ಯಾಬಿನೆಟ್‌ನಲ್ಲಿ ಮಹತ್ವದ ತೀರ್ಮಾನ ಮಾಡುವ ಸಾಧ್ಯತೆ ಇದೆ.
ಕೆಟಿಟಿಪಿ ಕಾಯ್ದೆ- 1999 (2000ರ ಕರ್ನಾಟಕ ಕಾಯ್ದೆ 29)ರ ಸೆಕ್ಷನ್ 6ಕ್ಕೆ ತಿದ್ದುಪಡಿಗೆ ಸರ್ಕಾರ ಮುಂದಾಗಿದೆ. ಆರ್ಥಿಕ ಇಲಾಖೆಯು ತಿದ್ದುಪಡಿ ಮಸೂದೆಯ ಕರಡಿಗೆ ಕಾನೂನು ಇಲಾಖೆಯಿಂದಲೂ ಸಮ್ಮತಿ ಸಿಕ್ಕಿದೆ ಎನ್ನಲಾಗಿದೆ. ಕ್ಯಾಬಿನೆಟ್‌ನಲ್ಲಿ ಅನುಮೋದನೆ ಪಡೆದು ಮುಂದಿನ ವಾರ ಅಧಿವೇಶನದಲ್ಲಿ ಬಿಲ್ ಮಂಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.
ಕೆಟಿಪಿಪಿ ಕಾಯ್ದೆಗೆ ಸರ್ಕಾರ ಹಿಂದೆಯೇ ತಿದ್ದುಪಡಿ ತಂದಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುತ್ತಿಗೆದಾರರಿಗೆ 50 ಲಕ್ಷ ರೂ. ವರೆಗಿನ ಕಾಮಗಾರಿಗಳಲ್ಲಿ 24.10% ರಷ್ಟು ಮೀಸಲಾತಿ ಕಲ್ಪಿಸಿತ್ತು. 2023ರ ಮಾರ್ಚ್ 29ರಂದು ಮತ್ತೆ ತಿದ್ದುಪಡಿ ಮಾಡಿ ಈ ಮೀಸಲಾತಿಯನ್ನ 1 ಕೋಟಿ ತನಕ ವಿಸ್ತರಣೆ ಮಾಡಿತ್ತು.
ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಿದ ಗುತ್ತಿಗೆದಾರರಿಗೆ 4% ರಷ್ಟು ಮೀಸಲಾತಿ, 2ಎಗೆ ಸೇರಿದ ಗುತ್ತಿಗೆದಾರರಿಗೆ 15%ರಷ್ಟು ಮೀಸಲಾತಿ ನೀಡಲಾಗಿದೆ. ಇದೀಗ ಮುಸ್ಲಿಂ ಜನಪ್ರತಿನಿಧಿಗಳ ಮನವಿ ಮೇರೆಗೆ ಮುಸ್ಲಿಂ ಮೀಸಲಾತಿಗೆ ಸರ್ಕಾರ ಮುಂದಾಗಿದೆ. ಸರ್ಕಾರದ ನೀತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ.