ಚೆನ್ನೈ : ಕ್ಷೇತ್ರ ಪುನರ್ ವಿಂಗಡಣೆ ವಿಷಯವನ್ನು ಚರ್ಚಿಸಲು ನಡೆದ ಸರ್ವಪಕ್ಷ ಸಭೆಯಲ್ಲಿ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್, ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳನ್ನು ಪುನರ್‌ವಿಂಗಡಿಸುವ ಪ್ರಸ್ತಾವಿತ ಕ್ರಮವನ್ನು ಸಾಮೂಹಿಕವಾಗಿ ವಿರೋಧಿಸಲು ದಕ್ಷಿಣ ರಾಜ್ಯಗಳ ಸಂಸದರು ಮತ್ತು ಪಕ್ಷದ ಪ್ರತಿನಿಧಿಗಳ ಜಂಟಿ ಕ್ರಿಯಾ ಸಮಿತಿಯನ್ನು ರಚಿಸುವಂತೆ ಸೂಚಿಸಿದ್ದಾರೆ.
ಎಂ.ಕೆ ಸ್ಟಾಲಿನ್ ಅಧ್ಯಕ್ಷತೆಯಲ್ಲಿ ಚೆನ್ನೈನಲ್ಲಿ ನಡೆದ ಸಭೆಯಲ್ಲಿ ಪ್ರಮುಖ ವಿರೋಧ ಪಕ್ಷ ಎಐಎಡಿಎಂಕೆ, ಕಾಂಗ್ರೆಸ್ ಮತ್ತು ಎಡ ಪಕ್ಷಗಳು, ನಟ-ರಾಜಕಾರಣಿ ಕಮಲ್ ಹಾಸನ್ ಮತ್ತು ವಿಜಯ್ ಅವರ ಟಿವಿಕೆ ಸೇರಿದಂತೆ ಇತರರು ಭಾಗವಹಿಸಿದ್ದರು.

ತಮಿಳುನಾಡು ಬಿಜೆಪಿ ಸಭೆಗೆ ಗೈರಾಗಿದ್ದು, ರಾಜ್ಯಾಧ್ಯಕ್ಷ ಅಣ್ಣಾಮಲೈ ಇದನ್ನು ಅತ್ಯಂತ ತಮಾಷೆ ಎಂದು ಬಣ್ಣಿಸಿದ್ದಾರೆ. ಕ್ಷೇತ್ರ ಪುನರ್‌ವಿಂಗಡಣೆ ದಕ್ಷಿಣ ರಾಜ್ಯಗಳಿಗೆ ಅನಾನುಕೂಲಕರವಾಗುವ ಭಯ ಕಾಲ್ಪನಿಕ ಎಂದು ಹೇಳಿದ್ದಾರೆ. ತಮಿಳು ರಾಷ್ಟ್ರೀಯವಾದಿ ನಾಮ್ ತಮಿಳರ್ ಕಚ್ಚಿ (ಎನ್‌ಟಿಕೆ) ಮತ್ತು ಮಾಜಿ ಕೇಂದ್ರ ಸಚಿವ ಜಿಕೆ ವಾಸನ್ ಅವರ ತಮಿಳು ಮಾನಿಲ ಕಾಂಗ್ರೆಸ್ (ಮೂಪನಾರ್) ಕೂಡ ಸಭೆಗೆ ಗೈರಾಗಿದ್ದವು.
ಸಭೆಯಲ್ಲಿ ಮಾತನಾಡಿದ ಸಿಎಂ ಎಂ.ಕೆ.ಸ್ಟಾಲಿನ್, ಸಂಸದೀಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿದರೆ ನಮಗೆ 22 ಹೆಚ್ಚುವರಿ ಸ್ಥಾನಗಳು ಸಿಗಬೇಕು. ಆದರೆ, ಪ್ರಸ್ತುತ ಜನಸಂಖ್ಯೆಯ ಪ್ರಕಾರ ನಮಗೆ ಕೇವಲ 10 ಹೆಚ್ಚುವರಿ ಸ್ಥಾನಗಳು ಸಿಗುತ್ತವೆ. ಅಂದರೆ ನಾವು 12 ಸ್ಥಾನಗಳನ್ನು ಕಳೆದುಕೊಳ್ಳುತ್ತೇವೆ. ಇದು ಭಾರತೀಯ ಪ್ರಜಾಪ್ರಭುತ್ವದಲ್ಲಿ ತಮಿಳುನಾಡಿನ ರಾಜಕೀಯ ಪ್ರಾತಿನಿಧ್ಯದ ಮೇಲಿನ ನೇರ ದಾಳಿಯಾಗಿದೆ.
ತಮಿಳುನಾಡಿನ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ತನ್ನ ಜನರ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ನಮ್ಮ ರಾಜ್ಯದ ಬಲವನ್ನು ಕಡಿಮೆ ಮಾಡಲಾಗುತ್ತಿದೆ. ನಾವು ಕ್ಷೇತ್ರ ಪುನರ್‌ವಿಂಗಡಣೆಯನ್ನು ವಿರೋಧಿಸುವುದಿಲ್ಲ. ಆದರೆ, ಕಳೆದ 50 ವರ್ಷಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದಿದ್ದಕ್ಕಾಗಿ ಇದು ಶಿಕ್ಷೆಯಾಗಬಾರದು ಎಂದು ತಿಳಿಸಿದ್ದಾರೆ.
ಈ ಸರ್ವಪಕ್ಷ ಸಭೆಯು 2026 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಕೈಗೊಳ್ಳಬಾರದು ಎಂದು ಒತ್ತಾಯಿಸುತ್ತದೆ. 2026 ರ ನಂತರ ಮತ್ತು ಮುಂದಿನ 30 ವರ್ಷಗಳವರೆಗೆ 1971 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಮಾಡಲಾಗುವುದು ಎಂದು ಪ್ರಧಾನಿ ಭರವಸೆ ನೀಡಬೇಕೆಂದು ನಾವು ಒತ್ತಾಯಿಸುತ್ತೇವೆ.
ಸಂಸದೀಯ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಅಗತ್ಯ ಸಾಂವಿಧಾನಿಕ ತಿದ್ದುಪಡಿಗಳನ್ನು ಮಾಡಬೇಕು. ಈ ಸರ್ವಪಕ್ಷ ಸಭೆಯು ಈ ಬೇಡಿಕೆಗಳನ್ನು ತಮಿಳುನಾಡಿನ ಕನಿಷ್ಠ ನಿರೀಕ್ಷೆಗಳಾಗಿ ಇರಿಸುತ್ತದೆ. ನಾವು ಈ ವಿಷಯವನ್ನು ಜನರ ಬಳಿಗೆ ತೆಗೆದುಕೊಂಡು ಹೋಗಿ ಅದರ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ದಕ್ಷಿಣ ಭಾರತದ ಸಂಸದರಿಗಾಗಿ ಜಂಟಿ ಕ್ರಿಯಾ ಸಮಿತಿಯನ್ನು ಸಹ ರಚಿಸುತ್ತೇವೆ ಎಂದು ಹೇಳಿದರು.