ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ನಲ್ಲಿ ರಾಜ್ಯದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಗ್ಯಾರೆಂಟಿ ಹೊರತಾಗಿಯೂ ಬಜೆಜ್ನಲ್ಲಿ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ನಲ್ಲಿ ಪ್ರಮುಖ ಅಂಶಗಳು ಇಲ್ಲಿವೆ.
ಬಜೆಟ್ನ ಮುಖ್ಯಾಂಶಗಳು –
- ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆಯನ್ನು 6 ದಿನಕ್ಕೆ ವಿಸ್ತರಿಸಲಾಗುವುದು. ವಾರದಲ್ಲಿ 6 ದಿನ ಮೊಟ್ಟೆ, ಬಾಳೆಹಣ್ಣು ನೀಡಲು 1,500 ಕೋಟಿ ರೂ. ಮೀಸಲಿಡಲಾಗಿದ್ದು, ಅಜೀಂ ಪ್ರೇಮ್ಜಿ ಸಹಯೋಗದಲ್ಲಿ ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
- ಧಾರ್ಮಿಕ ದತ್ತಿ ಇಲಾಖೆ ಅರ್ಚಕರಿಗೆ ತಸ್ತೀಕ್ ಮೊತ್ತದ ಏರಿಕೆ ಮಾಡಲಾಗಿದೆ. 60 ಸಾವಿರ ರೂ.ನಿಂದ 72 ಸಾವಿರಕ್ಕೆ ತಸ್ತೀಕ್ ಮೊತ್ತ ಏರಿಸಲಾಗುವುದು. ಕರ್ನಾಟಕ ದೇವಾಲಯ ವಸತಿ ಕೋಶ ಸ್ಥಾಪನೆಗೆ ನಿರ್ಧಾರ ಮಾಡಲಾಗಿದೆ.
- ದೇವಾಲಯಗಳ ಛತ್ರಗಳಲ್ಲಿ ರೂಮ್ ಬುಕಿಂಗ್ಗೆ ವ್ಯವಸ್ಥೆ ಕಲ್ಪಿಸಲಾಗುವುದು. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮದಡಿ 5 ಸಾವಿರ ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಬಜೆಟ್ನಲ್ಲಿ ಘೋಷಣೆ ಮಾಡಿದ್ದಾರೆ.
- ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ ಡಾ.ಮನಮೋಹನ್ ಸಿಂಗ್ ವಿಶ್ವವಿದ್ಯಾಲಯ ಎಂದು ಮರುನಾಮಕರಣ ಮಾಡಲಾಗುವುದು ಎಂದರು.
- ಪ್ರವರ್ಗ 1, 2ಎ, 2ಬಿ (ಮುಸ್ಲಿಂ) ಸಮುದಾಯದವರಿಗೆ 2 ಕೋಟಿ ರೂ.ವರೆಗೆ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲಾತಿ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಘೋಷಿಸಿದ್ದಾರೆ. ಕೈಗಾರಿಕ ಪ್ರದೇಶ ಭೂಮಿ ಹಂಚಿಕೆಯಲ್ಲೂ ಪ್ರವರ್ಗ ೧ ೨ಎ ಜತೆ ೨ಬಿ (ಮುಸ್ಲಿಂ) ಗೆ ಶೇಕಡಾ ೨೦ ರಷ್ಟು ಮೀಸಲಾತಿ ಘೋಷಿಸಿದ್ದಾರೆ.
- ರಾಜ್ಯದಲ್ಲಿ ಜಲಸಾರಿಗೆ ಕ್ಷೇತ್ರದಲ್ಲಿ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಕ್ರೂಸ್, ವಾಟರ್ ಮೆಟ್ರೋ ಮತ್ತು ಕೋಸ್ಟಲ್ ಬರ್ತ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಿರ್ಧರಿಸಿದೆ.
- ಉತ್ತರ ಕನ್ನಡ ಜಿಲ್ಲೆ ಮಂಕಿ ಗ್ರಾಮದಲ್ಲಿ ಬಂದರು ನಿರ್ಮಾಣ ಮಾಡಲಾಗುವುದು. ಮಂಗಳೂರಿನಲ್ಲಿ ಜಲಸಾರಿಗೆ ಸಂಗ್ರಹಾಲಯ ಅನುಭವನ ಕೇಂದ್ರ ತೆರೆಯಲಾಗುವುದು ಎಂದು ಸಿಎಂ ಹೇಳಿದರು.
- ರೇಷ್ಮೆ ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ನೀಡಿಲು ಸರ್ಕಾರ ನಿರ್ಧರಿಸಿದೆ. ರೇಷ್ಮೆ ಅಭಿವೃದ್ಧಿ ಯೋಜನೆಗೆ 55 ಕೋಟಿ ರೂ. ಅನುದಾನ ನೀಡಲಾಗುವುದು.
- ಮಧ್ಯಮವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ, 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ ನೀಡಲಾಗುವುದು.
- ರಾಮನಗರ, ಶಿಡ್ಲಘಟ್ಟ ಹೈಟೆಕ್ ರೇಷ್ಮೆಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ಅನುಷ್ಠಾನಕ್ಕೆ 250 ಕೋಟಿ ರೂ. ಮೀಸಲು ಇಡಲಾಗುವುದು. ಮೈಸೂರಿನಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು.
- ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಲಯಗಳ ಮೂಲಸೌಕರ್ಯಕ್ಕೆ 50 ಕೋಟಿ ರೂ. ಮೀಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 30 ಮೆಟ್ರಿಕ್-ನಂತರದ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು.
- ಅತ್ಯಂತ ಹಿಂದುಳಿದ 46 ಅಲೆಮಾರಿ ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗಾಗಿ ನಾಲ್ಕು ಕಂದಾಯ ವಿಭಾಗಗಳಲ್ಲಿ ತಲಾ ಒಂದರಂತೆ ಡಿ.ದೇವರಾಜ ಅರಸು ವಸತಿ ಶಾಲೆಗಳ ಪ್ರಾರಂಭ.
- ಇಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳಿಗೆ 62 ಹೊಸ ಮೆಟ್ರಿಕ್ ನಂತರದ ವಸತಿನಿಲಯಗಳನ್ನು ಪ್ರಾರಂಭಿಸಲು 15 ಕೋಟಿ ರೂ. ಮೀಸಲು.
- ವಿದ್ಯಾರ್ಥಿನಿಲಯಗಳ ಕಟ್ಟಡಗಳ ರಿಪೇರಿ/ದುರಸ್ತಿ ಮಾಡಲು 25 ಕೋಟಿ ರೂ. IAS, IPS, KAS, KSPS ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿ ಸಹಿತ ತರಬೇತಿ ನೀಡಲು ಬೆಂಗಳೂರಿನಲ್ಲಿ ಎರಡು ಸುಸಜ್ಜಿತ ವಸತಿ ನಿಲಯ ನಿರ್ಮಾಣವಾಗುತ್ತದೆ.
- ಬೆಂಗಳೂರು ನಗರದಲ್ಲಿ ಹೊಸದಾಗಿ 9,000 ಚಾಲಿತ ಬಸ್ಗಳನ್ನು ರಸ್ತೆಗೆ ಇಳಿಸಲಾಗುವುದು. ಪಿಎಂ ಇ-ಡ್ರೈವ್ ಯೋಜನೆಯಡಿ 14,750 ಹೊಸ ಬಸ್ ಖರೀದಿಗೆ ನಿರ್ಧರಿಸಲಾಗಿದೆ. 14,750 ಬಸ್ಗಳ ಪೈಕಿ 9 ಸಾವಿರ ಬಸ್ ಬಿಎಂಟಿಸಿಗೆ ಸೇರ್ಪಡೆಗೆ ಉದ್ದೇಶ ಹೊಂದಲಾಗಿದೆ.
- ಇ-ಜಮಾಬಂದಿ ತಂತ್ರಾಂಶ ಅಭಿವೃದ್ಧಿಪಡಿಸಿ ಪ್ರಸ್ತುತ ಸಾಲಿನಿಂದ ಜಾರಿ ಮಾಡಲಾಗುವುದು. ಜಮೀನುಗಳ ಪಹಣಿಗಳನ್ನು ವಾರಸುದಾರರಿಗೆ ಖಾತೆ ಮಾಡಲು ಇ-ಪೌತಿ ಆಂದೋಲನ ಆರಂಭಿಸಲಾಗುವುದು.
- ಹೊಸದಾಗಿ ರಚನೆಯಾದ ತಾಲ್ಲೂಕುಗಳ ಪೈಕಿ 21 ತಾಲ್ಲೂಕುಗಳಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.