ಬೆಂಗಳೂರು : ಸಿಎಂ ಸಿದ್ದರಾಮಯ್ಯ ಇಂದು (ಶುಕ್ರವಾರ) 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದು ಅವರ ದಾಖಲೆಯ 16ನೇ ಬಜೆಟ್ ಆಗಿದೆ. ಸಿದ್ದರಾಮಯ್ಯ ನೇತೃತ್ವದ ಈಗಿನ ಕಾಂಗ್ರೆಸ್ ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ.
ಹಿಂದಿನ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ವಿಚಾರದಲ್ಲಿ ಸಾಕಷ್ಟು ಕುತೂಹಲ ಇತ್ತು. 3.71 ಲಕ್ಷ ಕೋಟಿ ರೂ ಗಾತ್ರದ ಬಜೆಟ್ ಮಂಡನೆ ಮಾಡಿದ್ದರು. ಈ ಬಾರಿ ಬಜೆಟ್ ಗಾತ್ರ 4 ಲಕ್ಷ ಕೋಟಿ ರೂಗಿಂತಲೂ ಹೆಚ್ಚಾಗಿದೆ.
ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ (2025-26) 10,100 ಕೋಟಿ ರೂ ಹಣವನ್ನು ಬಜೆಟ್ನಲ್ಲಿ ನೀಡಲಾಗಿದೆ. ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಗೆ ಮುಂಬರುವ ವರ್ಷದಲ್ಲಿ 28,608 ಕೋಟಿ ರೂ ಮೀಸಲಿರಿಸಲಾಗಿದೆ.
ಇದರ ಜೊತೆಗೆ ಮಹಿಳೆಯರ ಸಬಲೀಕರಣಕ್ಕೆ ಮತ್ತಷ್ಟು ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಅಕ್ಕ ಕೆಫೆ, ಅಕ್ಕ ಕೋ ಆಪರೇಟಿವ್ ಸೊಸೈಟಿಗಳ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಹಾಗೆಯೇ, 16 ಹೊಸ ಮಹಿಳಾ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತಿದೆ ಎನ್ನಲಾಗಿದೆ.