ರಾಮನಗರ : ಮೇಕೆದಾಟು ನಮಗೆ ವರ ಎಂದು ತಮಿಳುನಾಡು ಶಾಸಕರೇ ನನ್ನ ಬಳಿ ಹೇಳಿದ್ದಾರೆ. ಆದರೆ ರಾಜಕೀಯವಾಗಿ ವಿರೋಧ ಮಾಡುತ್ತಿದ್ದಾರೆ ಅಷ್ಟೇ ಎಂದು ನಂಜಾವಧೂತ ಶ್ರೀ ಹೇಳಿಕೆ ನೀಡಿದ್ದಾರೆ.
ಮೇಕೆದಾಟು ಯೋಜನೆ ಕುರಿತು ಮಾಗಡಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರದ ವಿರೋಧ ಇದೆ. ಈ ನಡುವೆ ದೇವೇಗೌಡರು ಕೇಂದ್ರದ ಜೊತೆ ಮಾತನಾಡಿ ಮನವೊಲಿಕೆ ಮಾಡಿದ್ದಾರೆ. ಮೇಕೆದಾಟು ನಮ್ಮ ಹಕ್ಕು ಎಂದು ಡಿಸಿಎಂ ಡಿಕೆಶಿ ಪಾದಯಾತ್ರೆ ಮಾಡಿದ್ದಾರೆ. ಆದರೆ ಅದಕ್ಕೂ ಮೊದಲು ಮೇಕೆದಾಟು ಯೋಜನೆ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದರು. ಪಕ್ಷಾತೀತವಾಗಿ ಮೇಕೆದಾಟು ಯೋಜನೆ ಮಾಡಬೇಕು ಅನ್ನೋ ಹಂಬಲವಿದೆ. ಪಕ್ಷಾತೀತವಾಗಿ ಎಲ್ಲರೂ ಮೇಕೆದಾಟು ಯೋಜನೆಗೆ ಬೆಂಬಲಿಸುತ್ತಾರೆ ಎಂದರು.
ತಮಿಳುನಾಡಿನಲ್ಲಿ ಯಾವ ರೀತಿ ನೀರಿಗೆ ಜಾತಿ, ಪಕ್ಷ ಇಲ್ಲವೋ ಆ ರೀತಿ ಕರ್ನಾಟಕದಲ್ಲೂ ಬೆಂಬಲ ಸಿಗಬೇಕು. ಎಲ್ಲಾ ಜನ ನಮ್ಮವರೇ, ಇಡೀ ನಾಡು ನಮ್ಮದು ಎನ್ನುವ ರೀತಿ ಒಗ್ಗಟ್ಟಾಗಿ ನಿಲ್ಲಬೇಕು. ಪಕ್ಷಾತೀತವಾಗಿ ಹೋರಾಟ ಆಗಿದ್ದೇ ಆದಲ್ಲಿ ಕೆಲವೇ ವರ್ಷಗಳಲ್ಲಿ ಮೇಕೆದಾಟು ಆಗುತ್ತದೆ. 64 ಟಿಎಂಸಿ ನೀರು ಸದ್ಬಳಕೆ ಮಾಡಕೊಳ್ಳಬಹುದಾಗಿದೆ. ತಮಿಳುನಾಡಿನಲ್ಲೂ ಈ ನೀರನ್ನು ಬಳಸಿಕೊಳ್ಳುತ್ತಿಲ್ಲ. ನಾವು ಕೂಡ ಬಳಸಿಕೊಳ್ಳುತ್ತಿಲ್ಲ. ನೂರಾರು ಟಿಎಂಸಿ ನೀರು ಸಮುದ್ರದ ಪಾಲಾಗುತ್ತಿದೆ ಎಂದು ಹೇಳಿದರು.
ಹೊಸೂರಿಗೆ ಹೋಗಿದ್ದ ವೇಳೆ ತಮಿಳುನಾಡಿನ ಶಾಸಕರು ಈ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾರೆ. ಮೇಕೆದಾಟು ನಮಗೆ ವರ ಎಂದು ಮೂರ್ನಾಲ್ಕು ಶಾಸಕರು ನಮ್ಮ ಬಳಿ ಮಾತನಾಡಿದ್ದರು. ಆದರೆ ರಾಜಕೀಯವಾಗಿ ಇದನ್ನ ವಿರೋಧ ಮಾಡುತ್ತಿದ್ದಾರೆ ಅಷ್ಟೇ. ಇದು ಯಾರಿಗೂ ಶ್ರೇಯಸ್ಸು ತರುವುದಿಲ್ಲ. ಹೀಗಾಗಿ ಎರಡೂ ರಾಜ್ಯದ ಸರ್ಕಾರಗಳು ಮೇಕೆದಾಟು ಯೋಜನೆ ಮಾಡಿದ್ರೆ ಒಳ್ಳೆಯದಾಗುತ್ತೆ ಎಂದು ತಿಳಿಸಿದರು.