ನವದೆಹಲಿ : ಸಿಲಿಕಾನ್‌ ಸಿಟಿಯಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಸ್ಥಳ ಆಯ್ಕೆ ಮಾಡಿ ಮೊನ್ನೆಯಷ್ಟೇ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ. ಈ ನಡುವೆ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2 ಸ್ಥಳ ಸೂಕ್ತ ಅಂತ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ.

ಕರ್ನಾಟಕ ಸರ್ಕಾರವು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಟ್ಟಣೆ ತಗ್ಗಿಸಲು 2ನೇ ವಿಮಾನ ನಿಲ್ದಾಣವನ್ನು ಸ್ಥಾಪಿಸಲು ನಿರ್ಧಾರ ಕೈಗೊಂಡಿತ್ತು. ಇತ್ತ ತಮಿಳುನಾಡು ಸರ್ಕಾರ ಕೂಡ ಹೊಸೂರಿನಲ್ಲಿ ವಿಮಾನ ನಿಲ್ದಾಣ ಸ್ಥಾಪನೆ ಮಾಡಲು ಮುಂದಾಗಿತ್ತು.

ಕರ್ನಾಟಕ ಸರ್ಕಾರವು ಸ್ಥಳ ಹುಡುಕಾಟ ನಡೆಸಿ 2-3 ದಿನಗಳ ಹಿಂದಷ್ಟೇ ಕೇಂದ್ರ ಸರ್ಕಾರದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಷ್ಟರೊಳಗೆ ತಮಿಳುನಾಡು ಸರ್ಕಾರವು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಹೊಸೂರು ಬಳಿಯ 2 ಸ್ಥಳ ಸೂಕ್ತ ಎಂಬ ವರದಿಯನ್ನು ಪಡೆದುಕೊಂಡಿದೆ.

ಒಂದು ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (TAAL) ವಿಮಾನ ನಿಲ್ದಾಣದಿಂದ ಸುಮಾರು 1.5 ಕಿ.ಮೀ ದೂರದಲ್ಲಿದೆ. ಮತ್ತೊಂದು ಉಲಗಂ ಬಳಿ (ಹೊಸೂರಿನ ಪೂರ್ವ ಮತ್ತು ಶೂಲಗಿರಿಯ ಉತ್ತರ) ಹೊಸೂರಿನಿಂದ ಸುಮಾರು 15.5 ಕಿ.ಮೀ ದೂರದಲ್ಲಿದೆ. ಎಲೆಕ್ಟ್ರಾನಿಕ್‌ ಸಿಟಿ ಹಾಗೂ ಸರ್ಜಾಪುರ ಎರಡಕ್ಕೂ ಉಲಗಂ ಸಮೀಪದಲ್ಲಿಯೇ ಇದೆ. ಎರಡರಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡಿಕೊಳ್ಳುವಂತೆ ತಮಿಳುನಾಡಿಗೆ ಕೇಂದ್ರ ತಿಳಿಸಿದೆ.

ತಮಿಳುನಾಡು ಸರ್ಕಾರವು 2024ರ ಅಕ್ಟೋಬರ್‌ನಲ್ಲಿ ಅಧ್ಯಯನಕ್ಕಾಗಿ ಐದು ಸ್ಥಳಗಳನ್ನು ಆಯ್ಕೆ ಮಾಡಿತ್ತು. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಸಾಧ್ಯಾಸಾಧ್ಯತಾ ವರದಿಯನ್ನು ತಮಿಳುನಾಡು ಸರ್ಕಾರಕ್ಕೆ ನೀಡಿದೆ. ಎರಡು ಸ್ಥಳಗಳನ್ನು ಪರಿಶೀಲಿಸಿದ ನಂತರ ಈ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯ ಪ್ರಕಾರ, ಎರಡೂ ಸ್ಥಳಗಳು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸೂಕ್ತವಾಗಿವೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *