ಇಸ್ಲಾಮಾಬಾದ್ : ಜಾಫರ್‌ ಎಕ್ಸ್‌ಪ್ರೆಸ್‌ ಅಪಹರಣದ ನಂತರ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ ಹೇಳಿಕೊಂಡಿದೆ. ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ತಾನಿ ಭದ್ರತಾ ಪಡೆಗಳೊಂದಿಗೆ ಇನ್ನೂ ಎನ್‌ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದೆ.

ಬಿಎಲ್‌ಎ ಪ್ರತ್ಯೇಕತಾವಾದಿಗಳನ್ನು ಸದೆಬಡಿದು ಜನರ ರಕ್ಷಣೆ ಮಾಡಿರುವುದಾಗಿ ಪಾಕಿಸ್ತಾನ ಹೇಳಿಕೆ ನೀಡಿತ್ತು. ಆದರೆ, ಈ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ಬಿಎಲ್‌ಎ ನೀಡಿದೆ. ಪಾಕಿಸ್ತಾನ ಹೇಳುತ್ತಿರುವುದೆಲ್ಲ ಸುಳ್ಳು ಎಂದಿದೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು 48 ಗಂಟೆಗಳ ಸಮಯ ನೀಡಲಾಗಿತ್ತು. ಪಾಕಿಸ್ತಾನವು ತನ್ನ ಸಾಂಪ್ರದಾಯಿಕ ಮೊಂಡುತನ ಮತ್ತು ಮಿಲಿಟರಿ ದುರಹಂಕಾರವನ್ನು ಪ್ರದರ್ಶಿಸಿತು.

ಈ ಹಿನ್ನೆಲೆ 214 ಒತ್ತೆಯಾಳುಗಳನ್ನು ಗಲ್ಲಿಗೇರಿಸಿದೆ. ಪಾಕ್ ಮಾತುಕತೆಗೆ ನಿರಾಕರಿಸಿದ ಹಿನ್ನೆಲೆ ಸಾಮೂಹಿಕವಾಗಿ ಹತ್ಯೆ ಮಾಡಿರುವುದಾಗಿ ಬಂಡುಕೋರ ಗುಂಪಿನ ವಕ್ತಾರ ಜೀಯಂಡ್ ಬಲೂಚ್ ಹೇಳಿದ್ದಾರೆ. ಪಾಕಿಸ್ತಾನಿ ಸೇನೆಯು ಪರಿಸ್ಥಿತಿಯನ್ನು ತಪ್ಪಾಗಿ ನಿರೂಪಿಸಲು ಪ್ರಯತ್ನಿಸುತ್ತಿದೆ. ಯುದ್ಧ ನಿಯಮಗಳ ಅಡಿ ಕೆಲವರನ್ನು ನಾವೇ ಬಿಡುಗಡೆ ಮಾಡಿದ್ದೇವೆ.

ಇದನ್ನು ತಪ್ಪಾಗಿ ನಿರೂಪಿಸಿ ಪಾಕ್ ಸುಳ್ಳು ಹೇಳಿದೆ ಎಂದು ಬಿಎಲ್‌ಎ ಪ್ರತಿಕ್ರಿಯಿಸಿದೆ. ಈ ಹೇಳಿಕೆಯಲ್ಲಿ, ಕಾರ್ಯಾಚರಣೆಯಲ್ಲಿ ಸಾವನ್ನಪ್ಪಿದ 12 ಬಿಎಲ್‌ಎ ಹೋರಾಟಗಾರರಿಗೆ ಶ್ರದ್ಧಾಂಜಲಿ ಅರ್ಪಿಸಿದೆ. 33 ಬಿಎಲ್‌ಎ ಹೋರಾಟಗಾರರನ್ನು ಸೆದೆಬಡಿದು ಜನರನ್ನು ರಕ್ಷಿಸಿರುವುದಾಗಿ ಪಾಕ್‌ ಹೇಳಿತ್ತು.

Leave a Reply

Your email address will not be published. Required fields are marked *