ಮುಂಬೈ : ಮಹಿಳಾ ಪ್ರೀಮಿಯರ್ ಲೀಗ್‌ನ 3ನೇ ಆವೃತ್ತಿಯಲ್ಲಿ ಹರ್ಮನ್ ಪ್ರೀತ್ ಕೌರ್ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಫೈನಲ್ ಪಂದ್ಯದಲ್ಲಿ 8 ರನ್‌ಗಳ ರೋಚಕ ಜಯ ಸಾಧಿಸಿ 2ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ.
ವಿಶೇಷವೆಂದ್ರೆ 2023ರ ಮೊದಲ ಆವೃತ್ತಿಯಲ್ಲಿ ಡೆಲ್ಲಿ ವಿರುದ್ಧವೇ ಜಯಿಸಿ ಮುಂಬೈ ಚಾಂಪಿಯನ್ ಆಗಿತ್ತು. ಇನ್ನೂ ಸತತ 3ನೇ ಬಾರಿ ಫೈನಲ್‌ನಲ್ಲಿ ಸೋತ ಡೆಲ್ಲಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.
ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿ ತಂಡಕ್ಕೆ ಜೆಮಿಮಾ ಆಸರೆಯಾಗಿದ್ದರು. ಆದ್ರೆ 11ನೇ ಓವರ್‌ನಲ್ಲಿ ಅಮೆಲಿಯಾ ಕೇರ್ ಬೌಲಿಂಗ್‌ಗೆ ಬ್ಯಾಕ್ ಟು ಬ್ಯಾಕ್ ಬೌಂಡರಿ ಸಿಡಿಸುತ್ತಿದ್ದ ಜೆಮಿಮಾ 4ನೇ ಎಸೆತದಲ್ಲಿ ಸುಲಭ ಕ್ಯಾಚ್‌ಗೆ ತುತ್ತಾದರು.
ಅಲ್ಲದೇ 18ನೇ ಓವರ್‌ನಲ್ಲಿ ನಾಟ್ ಸ್ಕಿವರ್ ಬ್ರಂಟ್ ಬೌಲಿಂಗ್‌ಗೆ ಬಂದಾಗ 4ನೇ ಎಸೆತದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿದ್ದ ಮಾರಿಜಾನ್ನೆ ಕಪ್, 5ನೇ ಎಸೆತದಲ್ಲಿ ಶಿಖಾ ಪಾಂಡೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‌ಗೆ ಮರಳಿದ್ರು. ಇದು ಮುಂಬೈ ತಂಡದ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು.

ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬೈ ನಾಯಕಿ ಹರ್ಮನ್ ಪ್ರೀತ್ ಕೌರ್ ಸ್ಫೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 149 ರನ್ ಬಾರಿಸಿತು. 150 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ವಿರೋಚಿತ ಸೋಲು ಕಂಡಿತು.
ಮುಂಬೈ ಗೆಲುವಿನ ನಗೆ ಬೀರುತ್ತಿದ್ದಂತೆ ಫ್ರಾಂಚೈಸಿ ಮಾಲೀಕರಾದ ನೀತಾ ಅಂಬಾನಿ ನಾಯಕಿ ಹರ್ಮನ್ ಪ್ರೀತ್ ಅವರನ್ನ ಅಪ್ಪಿಕೊಂಡು ಸಂಭ್ರಮಿಸಿದರು.