ಇಂದಿರಾ ಗಾಂಧಿ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಏಳು ದಿನ ಜೈಲಿಗೆ ಹಾಕಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೆನಪಿಸಿಕೊಂಡಿದ್ದಾರೆ.
ಡೆರ್ಗಾಂವ್ನಲ್ಲಿ ಲಚಿತ್ ಬರ್ಫುಕನ್ ಪೊಲೀಸ್ ಅಕಾಡೆಮಿಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ ಅವರು, ಹಿತೇಶ್ವರ ಸೈಕಿಯಾ ಅಸ್ಸಾಂ ಮುಖ್ಯಮಂತ್ರಿಯಾಗಿದ್ದ, ಅವಧಿಯಲ್ಲಿ ನನ್ನನ್ನು ಬಂಧಿಸಿ ಜೈಲಿಗಟ್ಟಿದ್ದರು. ಏಳು ದಿನ ಜೈಲೂಟ ಮಾಡುವಂತಾಯಿತು ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ನನ್ನನ್ನು ಥಳಿಸಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ವಿರುದ್ಧ ‘ಅಸ್ಸಾಂ ಕಿ ಗಾಳಿಯಾ ಸುನಿ ಹೈ, ಇಂದಿರಾ ಗಾಂಧಿ ಖೂನಿ ಹೈ’ ಎಂದು ಘೋಷಣೆಗಳನ್ನು ಕೂಗುತ್ತಿದ್ದೆವು. ಇಂದಿರಾ ಅವರ ವಿರುದ್ಧ ಘೋಷಣೆ ಕೂಗಿದ್ದಕ್ಕೆ ನನ್ನನ್ನು ಬಂಧಿಸಿದ್ದರೆಂದು ತಿಳಿಸಿದ್ದಾರೆ.
ನಾನು ಕೂಡ ಅಸ್ಸಾಂನಲ್ಲಿ ಏಳು ದಿನಗಳ ಕಾಲ ಜೈಲೂಟ ತಿಂದಿದ್ದೇನೆ. ಆಗ ದೇಶಾದ್ಯಂತ ಅಸ್ಸಾಂ ಉಳಿಸಲು ಹೋರಾಟ ನಡೆದಿತ್ತು. ಇಂದು ಅಸ್ಸಾಂ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದಿದ್ದಾರೆ.
ಅಸ್ಸಾಂನ ಗೋಲಾಘಾಟ್ ಜಿಲ್ಲೆಯಲ್ಲಿ ಲಚಿತ್ ಬರ್ಫುಕನ್ ಅವರ ಹೆಸರಿನ ನವೀಕರಿಸಿದ ಪೊಲೀಸ್ ಅಕಾಡೆಮಿಯನ್ನು ಅಮಿತ್ ಶಾ ಉದ್ಘಾಟಿಸಿದ್ದಾರೆ. ಗೃಹ ಸಚಿವರೊಂದಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ಇತರರು ಇದ್ದರು.