ಕೆನಡಾ : ಕೆನಡಾ ನೂತನ ಪ್ರಧಾನಿ ಮಾರ್ಕ್‌ ಕಾರ್ನಿ ಅವರ ಸಂಪುಟದಲ್ಲಿ ಭಾರತೀಯ ಮೂಲದ ಇಬ್ಬರು ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಗಿದ್ದು, ದೆಹಲಿ ಮೂಲದ ಕಮಲಾ ಖೇರಾ ಅವರಿಗೆ ಆರೋಗ್ಯ ಖಾತೆ ನೀಡಲಾಗಿದೆ.

ಭಾರತೀಯ ಮೂಲದ ಅನಿತಾ ಆನಂದ್(58) ಅವರು ನಾವೀನ್ಯತೆ, ವಿಜ್ಞಾನ ಮತ್ತು ಕೈಗಾರಿಕಾ ಸಚಿವರಾಗಿ ಹಾಗೂ ಕಮಲಾ ಖೇರಾ(36) ಅವರು ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಮಲಾ ಖೇರಾ ಅವರು ಕೆನಡಾ ಸಂಸತ್ತಿನ ಇತಿಹಾಸದಲ್ಲಿಯೇ ಅತ್ಯಂತ ಕಿರಿಯ ವಯಸ್ಸಿಗೆ ಸಂಸತ್ ಪ್ರವೇಶಿಸಿದ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಈ ಇಬ್ಬರೂ ಮಾಜಿ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಸಂಪುಟದಲ್ಲೂ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ತಮ್ಮ ಸಚಿವ ಸ್ಥಾನಗಳನ್ನು ಉಳಿಸಿಕೊಂಡಿರುವ ಕೆಲವೇ ಕೆಲವು ಸಚಿವರಲ್ಲಿ ಈ ಇಬ್ಬರು ಸೇರಿದ್ದಾರೆ. ದೆಹಲಿ ಮೂಲದ ಖೇರಾ ಅವರ ಕುಟುಂಬವು ಅವರು ಇನ್ನೂ ಶಾಲೆಯಲ್ಲಿದ್ದಾಗ ಕೆನಡಾಕ್ಕೆ ಸ್ಥಳಾಂತರಗೊಂಡಿತು. ನಂತರ ಅವರು ಟೊರೊಂಟೊದ ಯಾರ್ಕ್ ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದರು.

ಕೆನಡಾದ ಪ್ರಧಾನಮಂತ್ರಿಗಳ ವೆಬ್‌ಸೈಟ್‌ನಲ್ಲಿ ಖೇರಾ ಅವರು 2015 ರಲ್ಲಿ ಬ್ರಾಂಪ್ಟನ್ ವೆಸ್ಟ್‌ನಿಂದ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಎಂದು ಉಲ್ಲೇಖಿಸಲಾಗಿದೆ. ನಿನ್ನೆಯಷ್ಟೇ ಕೆನಡಾದ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನಿ ಅವರು ಪ್ರಮಾಣವಚನ ಸ್ವೀಕರಿಸಿದ್ದರು. ಒಟ್ಟಾವಾದ ರೈಡೋ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಗವರ್ನರ್ ಜನರಲ್ ಮೇರಿ ಸೈಮನ್ ಅವರು ಕಾರ್ನಿ ಅವರಿಗೆ ಪ್ರಮಾಣ ವಚನ ಬೋಧಿಸಿದ್ದರು.

Leave a Reply

Your email address will not be published. Required fields are marked *