ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ವಿದ್ಯುತ್ ಸ್ಥಾವರದಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಕರೆದಿದೆ. ಆದರೆ, ಈ ವಿಷಯ ಕನ್ನಡಿಗರಿಗೆ ತಿಳಿಯದಂತೆ ಮುಚ್ಚಿಟ್ಟು ಕೇರಳ, ತಮಿಳುನಾಡು, ಮಹರಾಷ್ಟ್ರ, ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯದ ಪತ್ರಿಕೆಯಲ್ಲಿ ಮಾತ್ರ ಇದರ ಬಗ್ಗೆ ಪ್ರಕಟಣೆ ಹೊರಡಿಸಲಾಗಿದೆ.
ಕನ್ನಡದ ಯಾವ ಮಾಧ್ಯಮದಲ್ಲೂ ಈ ವಿಷಯ ತಿಳಿಯದಂತೆ ನೋಡಿಕೊಂಡಿದ್ದು, ಈ ಮೂಲಕ ಕನ್ನಡ ನೆಲದಲ್ಲಿ ಇದ್ದರೂ ಕನ್ನಡಿಗರಿಗೆ ದ್ರೋಹ ಎಸಗಿದೆ. ಕೈಗಾ ಅಣುಸ್ಥಾವರದಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಯಿಂದ ಹಿಡಿದು ಟೆಕ್ನೀಷಿಯನ್ ವರೆಗೆ ಒಟ್ಟು 108 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಸ್ಥಳೀಯ ಜನರಿಗೆ ಹಾಗೂ ರಾಜ್ಯದ ಜನರಿಗೆ ತಿಳಿಯದಂತೆ ಇಂಗ್ಲಿಷ್, ಹಿಂದಿ, ಮಲೆಯಾಳಿ, ತಮಿಳು ಭಾಷೆಯ ಪತ್ರಿಕೆಗಳಿಗೆ ಪ್ರಕಟಣೆ ನೀಡಿದೆ.
ಆದರೆ, ಸ್ಥಳೀಯ ಕನ್ನಡ ಪತ್ರಿಕೆಯಲ್ಲಿ ಪ್ರಕಟಣೆ ನೀಡದೇ ಸ್ಥಳೀಯರಿಗೆ ಉದ್ಯೋಗದ ಬಗ್ಗೆ ಮಾಹಿತಿ ದೊರೆಯದಂತೆ ಕೈಗಾ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಈ ಮೂಲಕ ಕನ್ನಡ ನೆಲದಲ್ಲಿದ್ದು, ಕನ್ನಡಿಗರಿಗೇ ಅನ್ಯಾಯ ಮಾಡಲು ಹೊರಟಿದ್ದಾರೆ, ಎಂದು ಕೇಂದ್ರ ಸರ್ಕಾರ ಸ್ವಾಮ್ಯದ ಕೈಗಾ ಅಣುಸ್ಥಾವರದ ಅಧಿಕಾರಿಗಳು ಹೇಳಿದ್ದಾರೆ.
ಜಿಲ್ಲೆಯ ಕರಾವಳಿಯಲ್ಲಿ ಕನ್ನಡ ಸಂಘಟನೆಗಳ ಶಕ್ತಿ ಕಡಿಮೆಯಿದೆ. ಕಾರವಾರದಲ್ಲಿ ಕನ್ನಡ ಸಂಘಟನೆಗೆ ಶಕ್ತಿ ಇಲ್ಲ. ನೆಪಕ್ಕೆ ಮಾತ್ರ ಎನ್ನುವಂತಾಗಿದೆ. ಇನ್ನು ಸ್ಥಳೀಯ ಜನರಿಗೂ ಆಸಕ್ತಿ ಕಡಿಮೆ. ಹೀಗಾಗಿ ತಾವು ಮಾಡಿದ್ದೇ ಸರಿ ಎನ್ನುವಂತೆ ಕನ್ನಡಿಗರನ್ನು ಬಿಟ್ಟು ಉಳಿದವರಿಗೆ ಉದ್ಯೋಗ ಕೊಡಲು ಕೈಗಾ ಅಧಿಕಾರಿಗಳು ಮುಂದಾಗಿದ್ದಾರೆ.