ಬೆಂಗಳೂರು : ಮುಸ್ಲಿಮರಿಂದ ದೇಶಕ್ಕೆ ಗಂಡಾಂತರ ಬರುತ್ತೆ ಅಂತ ನಾನು ಹೇಳಲ್ಲ. ಆದರೆ, ಮುಸ್ಲಿಂ ಮನಸ್ಥಿತಿ ಹೊಂದಿರುವ ಈ ಹಿಂದೂಗಳಿಂದ ದೇಶಕ್ಕೆ ಗಂಡಾಂತರ ಬರಲಿದೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿಕೆ ನೀಡಿದ್ದಾರೆ.

ಮುಸ್ಲಿಮರಿಗೆ ಗುತ್ತಿಗೆ ಮೀಸಲಾತಿ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಹಿಂದೆಯೂ ಮುಸ್ಲಿಮರಿಗೆ 4% ಮೀಸಲಾತಿ ಇತ್ತು. ಸಂವಿಧಾನದ ಪ್ರಕಾರ ಧಾರ್ಮಿಕ ಮೀಸಲಾತಿ ಕೊಡಲು ಅವಕಾಶ ಇಲ್ಲ. ಬೊಮ್ಮಾಯಿ ಸಿಎಂ ಇದ್ದಾಗ ಮುಸ್ಲಿಮರ ಮೀಸಲಾತಿ ಹಿಂದಕ್ಕೆ ಪಡೆಯಲಾಯಿತು. ಕಾಂಗ್ರೆಸ್ ನವ್ರು ಬಂದ ಮೇಲೆ ಮುಸ್ಲಿಮರಿಗೆ ಮೀಸಲಾತಿ ಕೊಡೋದಾಗಿ ಹೇಳಿದ್ರು.

ಇದರ ಭಾಗವಾಗಿ ಈಗ ಗುತ್ತಿಗೆಯಲ್ಲೂ ಮೀಸಲಾತಿ ಕೊಡಲು ಮುಂದಾಗಿದ್ದಾರೆ. ಇದರ ವಿರುದ್ಧ ನಾವು ಸದನದ ಒಳಗೆ ಮತ್ತು ಹೊರಗೆ ಹೋರಾಡ ಮಾಡ್ತೇವೆ. ನಮ್ಮ ರಾಷ್ಟ್ರೀಯ ನಾಯಕರೂ ಇದು ದೇಶ ವಿರೋಧಿ ನಡೆ ಅಂದಿದ್ದಾರೆ. ಇದು ಓಲೈಕೆ ರಾಜಕಾರಣ, ದೇಶಕ್ಕೆ ಗಂಡಾಂತರ ತರುವ ಕೆಲಸ ಎಂದು ತಿಳಿಸಿದ್ದಾರೆ.

ಒಳಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿ, ಒಳಮೀಸಲಾತಿ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟ. ಒಳಮೀಸಲಾತಿಯನ್ನು ಪರಿಶಿಷ್ಟ ವರ್ಗಕ್ಕೆ ಕೊಡಲೇಬೇಕು. ತೆಲಂಗಾಣದಲ್ಲಿ ಈಗಾಗಲೇ ಘೋಷಣೆ ಆಗಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಮಾಡ್ತಿದೆ. ಒಳಮೀಸಲಾತಿ ಕೊಡಲೇಬೇಕು. ಆದಷ್ಟು ಬೇಗ ಸರ್ಕಾರ ತೀರ್ಮಾನ ಕೈಗೊಳ್ಳಲಿ. ಒಳಮೀಸಲಾತಿಗೆ ಆಗ್ರಹಿಸಿ ಪಾದಯಾತ್ರೆ ಕೂಡಾ ನಡೀತಿದೆ ಎಂದಿದ್ದಾರೆ.

ಅಲ್ಪಸಂಖ್ಯಾತರು ಎಂದರೆ ಕೇವಲ ಮುಸ್ಲಿಮರು ಅಲ್ಲ ಎಂಬ ಡಿಕೆಶಿ ಹೇಳಿಕೆ ಕುರಿತು ಮಾತನಾಡಿ, ಜೈನರನ್ನೆಲ್ಲಾ ನೆಪ ಮಾಡಿಕೊಂಡಿದ್ದಾರೆ ಅವರು ಅಷ್ಟೇ. ಆದರೆ ಅವರ ಉದ್ದೇಶ ಕೇವಲ ಮುಸ್ಲಿಮರನ್ನು ಗಮನದಲ್ಲಿಟ್ಟುಕೊಂಡು ಮೀಸಲು ಕೊಡೋದಾಗಿದೆ. ತುಷ್ಟೀಕರಣದ ಭಾಗವಾಗಿ ಇದು ನಡೀತಿದೆ. ನಮ್ಮ ಸರ್ಕಾರ ಬಂದಾಗ ಯಾರನ್ನು ಎಲ್ಲಿ ಇಡಬೇಕು ಇಡ್ತೇವೆ ಎಂದು ಟಾಂಗ್ ಕೊಟ್ಟಿದ್ದಾರೆ.

ಬಿಡದಿಯಲ್ಲಿ ದೇಶ ವಿರೋಧ ಬರಹ ಪತ್ತೆ ಬಗ್ಗೆ ಪ್ರತಿಕ್ರಿಯಿಸಿ. ರಾಜ್ಯದಲ್ಲಿ ಇಂದು ಕಾನೂನು ಸುವ್ಯವಸ್ಥೆ ಕೆಟ್ಟಿದೆ. ತನ್ನದೇ ಆದ ಶಕ್ತಿ ಕೆಲವರಿಗೆ ಬಂದಿದೆ. ಈ ಸರ್ಕಾರ ಓಲೈಕೆ ಮಾಡಲು ಮುಂದಾಗಿದೆ. ಅದನ್ನ ಅವರು ಈ ರೀತಿ ದುರ್ಬಳಕೆ ಮಾಡಿಕೊಳ್ತಿದ್ದಾರೆ.

ನಮ್ಮನ್ನ ಯಾರೂ ಏನೂ ಮಾಡಲು ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದಾರೆ. ಸರ್ಕಾರ ತನ್ನ ಕಾರ್ಯಕರ್ತರನ್ನ ಕಾಪಾಡಿಕೊಳ್ಳಬೇಕು. ಕಾರ್ಯಕರ್ತರ ಜೇಬು ತುಂಬಬೇಕು. ದೇಶ, ರಾಜ್ಯಕ್ಕಿಂತ ಕಾರ್ಯಕರ್ತರೇ ಹೆಚ್ಚು ಅಂತ ಹೊರಟಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published. Required fields are marked *