ಬೆಂಗಳೂರು : ರಾಜ್ಯದ ಪ್ರಭಾವಿ ಸಚಿವರೊಬ್ಬರು ಹನಿಟ್ರ್ಯಾಪ್‌ ಖೆಡ್ಡಾದಲ್ಲಿ ಸಿಲುಕಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ತುಮಕೂರು ಭಾಗದ ಸಚಿವರನ್ನು ಮಟ್ಟ ಹಾಕಲು ಮತ್ತೊಬ್ಬ ಪ್ರಭಾವಿ ನಾಯಕರೊಬ್ಬರು, ಹನಿಟ್ರ್ಯಾಪ್‌ ಬಲೆಗೆ ಬೀಳಿಸಿರುವ ಆರೋಪ ಬಂದಿದೆ.

ಮಾಹಿತಿ ಪ್ರಕಾರ ಆ ನಾಯಕನಿಗೆ ಎರಡು ಸಲ ಬೆಂಗಳೂರಿನಲ್ಲಿ ಹನಿಟ್ರ‍್ಯಾಪ್ ಯತ್ನದ ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಆ ನಾಯಕ ಹನಿ ಜಾಲದ ಟ್ರ್ಯಾಪ್‌ ಬೀಳಲಿಲ್ಲ. ಎರಡು ಬಾರಿ ಹನಿಟ್ರ್ಯಾಪ್‌ ಯತ್ನ ನಡೆದ ಬೆನ್ನಲ್ಲೇ ಆ ನಾಯಕ ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯಲು ಅವರದ್ದೇ ತಂಡದಿಂದ ಮಾಹಿತಿ ಕಲೆ ಹಾಕಿದ್ದಾರೆ. ಆ ಬಳಿಕ ಆ ನಾಯಕನಿಗೆ ಅದು ಪೊಲಿಟಿಕಲ್ ಹನಿ ಗೇಮ್ ಎನ್ನುವ ವಿಚಾರ ಗೊತ್ತಾಗಿದೆ.

ರಾಜಕೀಯ ಭವಿಷ್ಯಕ್ಕೆ ಕಲ್ಲುಹಾಕಲೆಂದು ಹನಿಟ್ರ್ಯಾಪ್‌ ಯತ್ನ ಮಾಡಲಾಗುತ್ತಿದೆ ಎಂಬುದನ್ನು ಅರಿತ ನಾಯಕ ಆಲರ್ಟ್ ಆಗಿ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದಾರೆ. ಇಬ್ಬರು ಒಂದೇ ಪಕ್ಷದಲ್ಲಿರುವ ಕಾರಣ ಇಲ್ಲಿಯವರೆಗೆ ದೂರು ಕೊಟ್ಟಿಲ್ಲ. ಆದರೆ ದೂರು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಈ ವಿಚಾರದ ಬಗ್ಗೆ ಕಾಂಗ್ರೆಸ್‌ ನಾಯಕರೇ ಆಕ್ರೋಶ ಹೊರಹಾಕಿದ್ದಾರೆ. ಸುಸಂಸ್ಕೃತ ರಾಜ್ಯಕ್ಕೆ ಸಿಡಿ ಯೂನಿಟ್‌ನಿಂದ ಕೆಟ್ಟ ಹೆಸರು ಬಂದಿದೆ. ಸಿಡಿ ರಾಜಕಾರಣ ಮಾಡೋರಿಗೆ ಛೀಮಾರಿ ಹಾಕಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಬಿಕೆ ಹರಿಪ್ರಸಾದ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಇದು ದುರ್ದೈವದ ಸಂಗತಿಯಾಗಿದ್ದು, ಕೆಲವರಿಗೆ ಇದುವೇ ಉದ್ಯೋಗ ಆಗಿದ್ದು, ಇದು ಸರಿ ಅಲ್ಲ ಎಂದು ಸಚಿವ ಆರ್‌ಬಿ ತಿಮ್ಮಾಪುರ ಬೇಸರಿಸಿಕೊಂಡಿದ್ದಾರೆ. ಹನಿಟ್ರ್ಯಾಪ್‌ ಮಾಡುವವರಿಗೆ ಕ್ಷಮೆ ಇಲ್ಲ ಎಂದು ಸಚಿವ ಬೈರತಿ ಸುರೇಶ್ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *