ಸಸ್ಯಹಾರಿ ಪ್ರಾಣಿಯಾದ ಜಿಂಕೆಯು, ಹಾವೊಂದನ್ನು ತಿನ್ನುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಸ್ಯಾಹಾರಿ ಪ್ರಾಣಿಯ ಈ ವಿಚಿತ್ರ ನಡವಳಿಕೆಯನ್ನು ಕಂಡು ನೋಡುಗರು ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ವೀಡಿಯೊ
ಜಿಂಕೆಗಳು ಪ್ರಾಥಮಿಕವಾಗಿ ಸಸ್ಯಹಾರಿ ಪ್ರಾಣಿಗಳು. ಹುಲ್ಲು ಸೊಪ್ಪು, ಎಲೆಗಳನ್ನು ತಿನ್ನುತ್ತಾ ಬದುಕುತ್ತವೆ. ಈ ಸಾದು ಪ್ರಾಣಿಗಳು ಮಾಂಸಹಾರವನ್ನು ಸೇವಿಸಿರುವ ನಿದರ್ಶಗಳು ಎಲ್ಲೂ ಕಂಡು ಬಂದಿಲ್ಲ. ಜಿಂಕೆಗಳನ್ನು ಇತರ ಪ್ರಾಣಿಗಳು ಬೇಟೆಯಾಡುತ್ತವೇ ಹೊರತು, ಈ ಸಾದು ಪ್ರಾಣಿ ಇತರ ಜೀವಿಗಳಿಗೆ ತೊಂದರೆ ನೀಡುವುದಿಲ್ಲ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಜಿಂಕೆಯೊಂದು ಹಾವನ್ನು ಸಾಯಿಸಿ ತಿಂದಿದೆ. ಜಿಂಕೆಯು ಹಾವನ್ನು ತಿನ್ನುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವಿಚಿತ್ರ ಘಟನೆ ನೋಡುಗರನ್ನು ಗಾಬರಿಗೊಳಿಸಿದೆ.
ಈ ವೈರಲ್ ವಿಡಿಯೋವನ್ನು ಫಿಗೆನ್ (@TheFigen) ಎಂಬವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ನಾನು ಮೊದಲ ಬಾರಿಗೆ ಜಿಂಕೆಯೊಂದು ಹಾವನ್ನು ತಿನ್ನುವುದನ್ನು ನೋಡಿದ್ದು, ಜಿಂಕೆಗಳು ಹುಲ್ಲು ತಿನ್ನುವುದಿಲ್ಲವೇ? ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಕಾರಿನಲ್ಲಿ ರಸ್ತೆ ಮೂಲಕ ಸಾಗುತ್ತಿದ್ದ ವ್ಯಕ್ತಿಯೊಬ್ಬರು, ಅಲ್ಲಿಯೇ ರಸ್ತೆ ಪಕ್ಕದಲ್ಲಿ ಜಿಂಕೆಯೊಂದು ಹಾವನ್ನು ತಿನ್ನುತ್ತಿರುರುವುದನ್ನು ಗಮನಿಸಿದ್ದಾರೆ. ಇದೆಂತಹ ವಿಚಿತ್ರ ಎಂದು ಅಲ್ಲಿಯೇ ಕಾರ್ ನಿಲ್ಲಿಸಿ ಜಿಂಕೆ ಹಾವನ್ನು ತಿನ್ನುತ್ತಿರುವುದನ್ನು ವೀಡಿಯೋ ಮಾಡಿದ್ದಾರೆ. ವೀಡಿಯೋದಲ್ಲಿ ಮುದ್ದಾದ ಜಿಂಕೆಯೊಂದು ಶಾಂತ ರೀತಿಯಲ್ಲಿ ಹಾವೊಂದನ್ನು ಬಾಯಿಯಲ್ಲಿ ನೇತುಹಾಕಿಕೊಂಡು ಅಗಿಯುತ್ತಾ ತಿನ್ನುತ್ತಿರುವುದನ್ನು ಕಾಣಬಹುದು.
ಈ ವೈರಲ್ ವೀಡಿಯೋ 16.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 94.4 ಸಾವಿರ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಅನೇಕ ಈ ಬಗ್ಗೆ ಕಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ಬಳಕೆದಾರರು ‘ಜಿಂಕೆಗಳು ಸಾಮಾನ್ಯವಾಗಿ ಹಾವುಗಳನ್ನು ತಿನ್ನುವುದಿಲ್ಲ. ಜಿಂಕೆಗಳು ಸಸ್ಯಾಹಾರಿಗಳು, ಅಂದರೆ ಅವುಗಳ ಆಹಾರವು ಪ್ರಾಥವಿಕವಾಗಿ ಹುಲ್ಲುಗಳು, ಎಲೆಗಳು, ಚಿಗುರುಗಳು ಮತ್ತು ಹಣ್ಣುಗಳಂತಹ ಸಸ್ಯ ವರ್ಗವನ್ನು ಒಳಗೊಂಡಿರುತ್ತದೆ. ಕೆಲವು ಪ್ರಾಣಿಗಳು ತಮ್ಮ ನೈಸರ್ಗಿಕ ಆಹಾರದ ಭಾಗವಾಗಿ ಹಾವುಗಳನ್ನು ತಿನ್ನುತ್ತವೆ. ಆದರೆ ಜಿಂಕೆಗಳು ಅವುಗಳ ಗುಂಪಿಗೆ ಸೇರಿಲ್ಲ. ಅವುಗಳು ಪ್ರಾಥಮಿಕವಾಗಿ ಸಸ್ಯ ಮೂಲದ ಆಹಾರಗಳನ್ನು ಮಾತ್ರ ತಿನ್ನುತ್ತವೆ. ಹೀಗಾಗಿ ಈ ಜಿಂಕೆ ಹಾವನ್ನು ತಿಂದಿದ್ದು ಆತಂಕಕಾರಿಯಾಗಿದೆ’ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಇನ್ನೊಬ್ಬ ಬಳಕೆದಾರರು ‘ನನ್ನ ಜೀವಮಾನದಲ್ಲಿ ಇಂತಹ ಒಂದು ವಿಚಿತ್ರ ಈ ಮೊದಲು ನೋಡಿಲ್ಲ’ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ‘ಜಿಂಕೆ ತುಂಬಾ ಹಸಿದಿರಬೇಕು, ಹಾಗಾಗಿ ಹಾವನ್ನು ತಿಂದಿದೆ’ ಎಂದು ಕಮೆಂಟ್ ಮಾಡಿದ್ದಾರೆ.
ನ್ಯಾಷನಲ್ ಜಿಯೊಗ್ರಫಿಕ್ ಪ್ರಕಾರ, ಜಿಂಕೆಗಳು ರಂಜಕ, ಉಪ್ಪು ಮತ್ತು ಕ್ಯಾಲ್ಸಿಯಂನಂತಹ ಅಗತ್ಯ ಖನಿಜಗಳ ಹುಡುಕಾಟದಲ್ಲಿ ಮಾಂಸಹಾರವನ್ನು ತಿನ್ನಬಹುದು. ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಪ್ರಾಣಿಗಳು ತಿನ್ನುವ ಸಸ್ಯಗಳ ಲಭ್ಯತೆ ಸೀಮಿತವಾಗಿರುತ್ತದೆ. ಹಾಗಾಗಿ ಸಸ್ಯಾಹಾರಿ ಆಹಾರದಲ್ಲಿ ದೊರಕುವಂತಹ ಪೋಷಕಾಂಶಗಳ ಕೊರತೆಯನ್ನು ಸರಿದೂಗಿಸಲು ಈ ಸಮಯದಲ್ಲಿ ಮಾಂಸಹಾರವನ್ನು ಸೇವಿಸುತ್ತವೆ.