Mysore crime: ವೈದ್ಯನೆಂದು ನಂಬಿಸಿ ಮದುವೆ, ಹಣ ಚಿನ್ನ ಎಗರಿಸಿ ಪರಾರಿ.. ಸಾಫ್ಟ್ವೇರ್ ಇಂಜಿನಿಯರ್ ಮಹಿಳೆಯಿಂದ ಕಂಪ್ಲೇಂಟ್
ವ್ಯಕ್ತಿಯೋರ್ವ ವೈದ್ಯನೆಂದು ಹೇಳಿ ಮದುವೆಯಾಗಿ ಬಳಿಕ ಹಣ, ಚಿನ್ನಾಭರಣ ಲಪಟಾಯಿಸಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ದೂರು ದಾಖಲಿಸಿದ್ದಾರೆ.
ಮೈಸೂರು: ನಗರದ ವ್ಯಕ್ತಿಯೊಬ್ಬ ವೈದ್ಯನೆಂದು ವಧು ವರರ ಅನ್ವೇಷಣೆಯ ವೆಬ್ಸೈಟ್ವೊಂದರಲ್ಲಿ ಸುಳ್ಳು ಪ್ರೊಫೈಲ್ ಹಾಕಿ, ಬೆಂಗಳೂರಿನ ಸಾಫ್ಟ್ವೇರ್ ಇಂಜಿನಿಯರ್ ಮಹಿಳೆಯನ್ನು ಮದುವೆ ಆಗಿ ವಂಚಿಸಿರುವ ಆರೋಪ ನಗರದ ಎಸ್ ಬಿ ಎಂ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ನಗರದ ಕುವೆಂಪು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೈಸೂರು ಆರ್ ಟಿ ನಗರದ ಎಸ್ ಬಿ ಎಂ ಬಡಾವಣೆಯ ನಿವಾಸಿ ಕೆ ಬಿ ಮಹೇಶ್ (46) ವಿರುದ್ಧ ಬೆಂಗಳೂರು ಮೂಲದ 45 ವರ್ಷದ ಸಾಫ್ಟ್ವೇರ್ ಇಂಜಿನಿಯರ್ ಮಹಿಳೆ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಘಟನೆಯ ವಿವರ: 45 ವರ್ಷದ ಬೆಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಮಹಿಳೆವಿವಾಹವಾಗಲು ಮ್ಯಾಟ್ರಿಮೋನಿಯೊಂದರಲ್ಲಿ ವರನನ್ನು ಹುಡುಕುತ್ತಿದ್ದರು. ಈ ವೇಳೆ ಮಹೇಶ್ ರಿಕ್ವೆಸ್ಟ್ ಕಳುಹಿಸಿ, ತಾನು ಆರ್ಥೊ ಡಿಎನ್ಬಿ ಡಾಕ್ಟರ್ ಆಗಿದ್ದು, ಮೈಸೂರಿನಲ್ಲಿ ವಾಸವಿರುವುದಾಗಿ ಪರಿಚಯಿಸಿಕೊಂಡಿದ್ದಾನೆ. ನಂತರ ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂತರ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದು, ಮೊದಲ ಬಾರಿಗೆ ಬೆಂಗಳೂರಿನ ಮಾರತ್ ಹಳ್ಳಿ ಬಳಿ ಜ್ಯೂಸ್ ಶಾಪ್ನಲ್ಲಿ ಪರಸ್ಪರ ಭೇಟಿಯಾಗಿದ್ದರು. ಬಳಿಕ ಮಹಿಳೆಯನ್ನು ಕೆಲವು ದಿನಗಳ ಬಳಿಕ ಮೈಸೂರಿಗೆ ಕರೆಸಿಕೊಂಡ ಮಹೇಶ್, ವಿಜಯನಗರದ ನಾಲ್ಕನೇ ಹಂತದಲ್ಲಿ ಕ್ಲಿನಿಕ್ ತೆರೆಯುವುದಾಗಿ ನಂಬಿಸಿದ್ದ.
ಈ ವಿಚಾರವನ್ನು ತಮ್ಮ ಕುಟುಂಬದವರಿಗೆ ಮಹಿಳೆ ತಿಳಿಸಿ, ಅವರಿಂದ ಒಪ್ಪಿಗೆ ಪಡೆದು ವಿಶಾಖಪಟ್ಟಣದಲ್ಲಿ ಮಹೇಶ್ ಜೊತೆಗೆ ವಿವಾಹವಾಗುತ್ತಾರೆ. ಮರುದಿನ ಇಬ್ಬರು ಮೈಸೂರಿಗೆ ಬಂದಿದ್ದು, ನಂತರ ಆಪರೇಷನ್ ಇರುವುದಾಗಿ ಹೇಳಿ ಮಹೇಶ್ ಮನೆಯಿಂದ ಹೊರ ಹೋಗುತ್ತಾರೆ. ಮೂರು ದಿನಗಳ ಬಳಿಕ ಬಂದ ಮಹೇಶ್ ಕ್ಲಿನಿಕ್ ತೆರೆಯಲು 70 ಲಕ್ಷ ಲೋನ್ ತೆಗೆದುಕೊಡುವಂತೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೊಲೆ ಮಾಡುವುದಾಗಿ ಬೆದರಿಕೆ ಆರೋಪ: ಆದ್ರೆ ನಾನು 70 ಲಕ್ಷ ರೂ. ಲೋನ್ ತೆಗೆಯಲು ಒಪ್ಪದಿದ್ದಾಗ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಜೊತೆಗೆ ಮನೆಯಲ್ಲಿಟ್ಟಿದ್ದ 15 ಲಕ್ಷ ರೂ ನಗದು ಮತ್ತು 20 ತೋಲ ಚಿನ್ನಭಾರಣ ತೆಗೆದುಕೊಂಡು ಪರಾರಿಯಾಗಿದ್ದಾರೆ. ಬಳಿಕ ಕರೆ ಮಾಡಿದಾಗ ಫೋನ್ ಸ್ವಿಚ್ ಆಫ್ ಆಗಿದೆ ಎಂದು ಮಹಿಳೆ ದೂರಿದ್ದಾರೆ.
ಹೀಗಿರುವಾಗ ಬೆಂಗಳೂರಿನ ಮತ್ತೋರ್ವ ಮಹಿಳೆ ಸಹ ಆರ್ ಟಿ ನಗರದ ಮಹೇಶ್ ಅವರ ಮನೆಗೆ ಬಂದು, ತಮಗೂ ಮದುವೆಯಾಗಿ ಮೋಸ ಮಾಡಿದ್ದಾನೆ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾನು ಮೋಸ ಹೋಗಿರುವುದಾಗಿ ಅರಿತ ಸಾಫ್ಟ್ವೇರ್ ಇಂಜಿನಿಯರ್, ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮ್ಯಾಟ್ರಿಮೋನಿಗಳ ಮೂಲಕ ಸಿರಿವಂತ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ಅವರಿಗೆ ತಾನು ಶ್ರೀಮಂತ ಎಂದು ನಂಬಿಸಿ ಮದುವೆಯಾಗಿ, ನಂತರ ಅವರಿಂದ ಹಣ ಮತ್ತು ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಲಪಟಾಯಿಸುವುದೇ ವಂಚಕ ಮಹೇಶ್ ಕೆಲಸ ಎಂದು ವಂಚನೆಗೊಳಗಾದ ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ತನಿಖೆ ನಡೆಸಬೇಕೆಂದು ಸಂತ್ರಸ್ತೆ ಒತ್ತಾಯಿಸಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಮಹೇಶನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.