Modi US visit: ನಾಳೆಯಿಂದ ಪ್ರಧಾನಿ ಮೋದಿ ಅಮೆರಿಕ, ಈಜಿಪ್ಟ್ ಪ್ರವಾಸ: ಕಾರ್ಯಕ್ರಮಗಳು ಹೀಗಿವೆ..
ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿಯ ಕಾರ್ಯಕ್ರಮಗಳು ನಿಗದಿಯಾಗಿವೆ. ಮೂರು ದಿನಗಳ ಪ್ರವಾಸದಲ್ಲಿ ಹಲವು ಸಭೆ, ಔತಣಕೂಟಗಳಲ್ಲಿ ಭಾಗಿಯಾಗಲಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನಾಳೆಯಿಂದ ಮಹತ್ವದ ವಿದೇಶ ಪ್ರವಾಸ ಕೈಗೊಳ್ಳಲಿದ್ದಾರೆ.
ಜೂನ್ 25 ರವರೆಗಿನ ಪ್ರವಾಸದಲ್ಲಿ ಅಮೆರಿಕ ಮತ್ತು ಈಜಿಪ್ಟ್ ದೇಶಕ್ಕೆ ಅವರು ಭೇಟಿ ನೀಡುವರು. ಮೊದಲು ಅಮೆರಿಕಕ್ಕೆ ತೆರಳಲಿರುವ ಮೋದಿ, 21ರಂದು ನ್ಯೂಯಾರ್ಕ್ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಇದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಯೋಗ ದಿನದ ವೇಳೆ ಬೆಳಗ್ಗೆ 8ರಿಂದ 9ರವರೆಗೆ ನಡೆಯಲಿರುವ ಯೋಗಾಸನದಲ್ಲಿ ವಿಶ್ವಸಂಸ್ಥೆಯ ಅಧಿಕಾರಿಗಳು, ರಾಯಭಾರಿಗಳು, ಹಲವು ದೇಶಗಳ ರಾಜತಾಂತ್ರಿಕರು ಭಾಗವಹಿಸಲಿದ್ದಾರೆ. ಅಲ್ಲಿಂದ ವಾಷಿಂಗ್ಟನ್ಗೆ ತೆರಳಲಿರುವ ಪ್ರಧಾನಿ 22ರಂದು ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ನಂತರ ಕಾಂಗ್ರೆಸ್ನ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅದೇ ದಿನ ಸಂಜೆ ಬಿಡೆನ್ ದಂಪತಿ ಆಯೋಜಿಸಿರುವ ಅಧಿಕೃತ ಔತಣಕೂಟದಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ.
ಜೂನ್ 23ರಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹಾಗೂ ವಿದೇಶಾಂಗ ಸಚಿವ ಆಂಟೋನಿ ಬ್ಲಿಂಕನ್ ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ, ವಾಷಿಂಗ್ಟನ್ನಲ್ಲಿ ಹಲವು ಕಂಪನಿಗಳ ಸಿಇಒಗಳು ಹಾಗೂ ವಿವಿಧ ಕ್ಷೇತ್ರಗಳ ತಜ್ಞರ ಜತೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಅನಿವಾಸಿ ಭಾರತೀಯರೊಂದಿಗೂ ಸಂವಾದ ನಡೆಸಲಿದ್ದಾರೆ.
ಅದ್ಧೂರಿ ಸ್ವಾಗತಕ್ಕೆ ರೆಡಿ: ಪ್ರಧಾನಿ ಮೋದಿಯವರನ್ನು ಸ್ವಾಗತಿಸಲು ಅನಿವಾಸಿ ಭಾರತೀಯರು ವಿಶೇಷ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಭಾರತ ಮತ್ತು ಅಮೆರಿಕ ನಡುವಿನ ಸೌಹಾರ್ದ ಸಂಬಂಧವನ್ನು ಉಲ್ಲೇಖಿಸಿ, ವಾಷಿಂಗ್ಟನ್ನಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ನ್ಯೂಯಾರ್ಕ್, ಸ್ಯಾನ್ ಫ್ರಾನ್ಸಿಸ್ಕೋ ಮತ್ತು ವ್ಯೂಸ್ಟನ್ ಸೇರಿದಂತೆ 20 ನಗರಗಳಲ್ಲಿ ಏಕತಾ ರ್ಯಾಲಿಗಳು ಮತ್ತು ಪ್ರದರ್ಶನಗಳು ನಡೆಯಲಿವೆ. ಮೇರಿಲ್ಯಾಂಡ್ನ ಭಾರತೀಯ ನಿವಾಸಿ ರಾಘವೇಂದ್ರ ಎಂಬಾತ ಪ್ರಧಾನಿ ಮೋದಿ ಅವರ ದೊಡ್ಡ ಅಭಿಮಾನಯಾಗಿದ್ದು, ತಮ್ಮ ಕಾರಿನ ನಂಬರ್ ಪ್ಲೇಟ್ನಲ್ಲಿ NMODI ಎಂದು ಬರೆಸಿದ್ದಾರೆ. ಪ್ರಧಾನಿ ಮೋದಿಯವರನ್ನು ಅದ್ಧೂರಿಯಾಗಿ ಆಹ್ವಾನಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
ಸಂಸತ್ ಭಾಷಣಕ್ಕೆ ಫುಲ್ ರಷ್: ಜೂನ್ 22 ರಂದು ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ ಅವರ ಕಾರ್ಯಕ್ರಮಕ್ಕೆ ಜನರು ಮುಗಿಬಿದ್ದಿದ್ದಾರೆ. ಮೋದಿ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಭಾರತೀಯರಲ್ಲದೇ, ವಿದೇಶಿಯರೂ ನಾ ಮುಂದು ತಾ ಮುಂದು ಎಂದು ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಮೋದಿ ಭಾಷಣಕ್ಕೆ ಸೆನೆಟರ್ಗಳು ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಕರೆತರಲು ಸಿದ್ಧರಾಗಿದ್ದಾರೆ. ಐವರು ಇಂಡಿಯನ್ ಅಮೆರಿಕನ್ ಸದಸ್ಯರು, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಫೆಡೆಕ್ಸ್ ಸಿಇಒ ರಾಜ್ ಸುಬ್ರಮಣಿಯನ್ ಮತ್ತು ಹಲವು ಉದ್ಯಮಿಗಳನ್ನೂ ಮೋದಿ ಅವರಿಗೆ ನೀಡಲಾಗುವ ಔತಣಕೂಟಕ್ಕೆ ಆಹ್ವಾನಿಸಲಾಗಿದೆ ಎಂದು ಹೇಳಲಾಗಿದೆ.
ಪ್ರಧಾನಿ ಅಮೆರಿಕ ಭೇಟಿಯ ವೇಳೆ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ ಎಂದು ಹಲವು ಭಾರತೀಯರ ಜತೆಗೆ ಅಮೆರಿಕದ ಸೆನೆಟರ್ಗಳೂ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಸವಾಲುಗಳನ್ನು ಎದುರಿಸಲು ಉಭಯ ದೇಶಗಳು ಹೆಚ್ಚು ನಿಕಟವಾಗಿ ಕೆಲಸ ಮಾಡಬೇಕಾಗಿದೆ ಎಂದು ಅಮೆರಿಕ ಸಂಸತ್ ಅಭಿಪ್ರಾಯಪಟ್ಟಿದೆ. ಅಮೆರಿಕ ಪ್ರವಾಸ ಮುಗಿಸಿದ ಬಳಿಕ ಮೋದಿ ಅವರು ಜೂನ್ 24 ಮತ್ತು 25ರಂದು ಈಜಿಪ್ಟ್ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.