Dog Lovers : ಮೊದಲಿಗೆ ಈ ಹುಡುಗಿ ತಾನೊಬ್ಬಳೇ ನಾಯಿಯ ಸ್ನೇಹ ಮಾಡಿದ್ದಾಳೆ. ನಂತರ ತನ್ನೊಂದಿಗಿರುವ ಮಕ್ಕಳನ್ನೂ ಕರೆದುಕೊಂಡು ಬಂದಿದ್ದಾಳೆ. ನಾಯಿ ಗೇಟಿನೊಳಗೇ ಇದ್ದು ಇವರೊಂದಿಗೆ ಚೆಂಡಾಟವಾಡಿದೆ. ಎಂಥ ಆಪ್ತ ಈ ವಿಡಿಯೋ.
Friendship : ಮಕ್ಕಳಾಗಲಿ, ಪ್ರಾಣಿಗಳಾಗಲಿ ಇವರು ತನ್ನವರು ಅವರು ಪರರು ಎಂಬ ಭೇದಭಾವ ಎಳ್ಳಷ್ಟೂ ಮಾಡಲಾರವು. ತಮ್ಮೊಂದಿಗೆ ಯಾರು ನಗುಮುಖದಿಂದ ಮಾತನಾಡುತ್ತಾರೆ, ಆಟವಾಡಿಸುತ್ತಾರೆ ಅವರೆಡೆ ಅನಾಯಾಸವಾಗಿ ಸ್ನೇಹಭಾವದಿಂದ ಒಡನಾಡುತ್ತವೆ. ಪುಟ್ಟಜೀವಗಳ ಅಸ್ತಿತ್ವವೇ ಸರಳತೆ ಮತ್ತು ಮುಗ್ಧತೆ. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಗಮನಿಸಿ. ನಿರಾಶ್ರಿತ ಮಕ್ಕಳು ಈ ಮನೆಯ ಸಾಕುನಾಯಿಯೊಂದಿಗೆ (Dog) ಚೆಂಡಾಟವಾಡುತ್ತಿದ್ಧಾರೆ. ನಾಯಿ ಕೂಡ ಎಷ್ಟು ಉಲ್ಲಾಸದಿಂದ ಅವರೊಂದಿಗೆ ಸ್ಪಂದಿಸುತ್ತಿದೆ ನೋಡಿ.
ಬ್ರೌನ್ ಬಾಕ್ಸರ್ ಟಫಿ ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಮಕ್ಕಳು ಚೆಂಡು ಎಸೆದಾಗ ಪ್ರತೀ ಬಾರಿಯೂ ಅದು ಬಾಯಿಯಿಂದ ಚೆಂಡನ್ನು ಹಿಡಿಯುತ್ತದೆ. ನಂತರ ಅವರತ್ತ ಎಸೆಯುತ್ತದೆ. ಪರಸ್ಪರ ಕುಣಿದಾಡುತ್ತ ಈ ಆಟವನ್ನು ನಾಯಿಯೊಂದಿಗೆ ಅವರೆಲ್ಲ ಆನಂದಿಸುತ್ತಾರೆ. ನೆಟ್ಟಿಗರು ಈ ವಿಡಿಯೋ ನೋಡಿ ಸಂಪೂರ್ಣ ಪರವಶರಾಗಿದ್ದಾರೆ. ಆದರೆ, ಈ ವಿಡಿಯೋಗಿಂತ ಮೊದಲು ಇದೇ ನಾಯಿಯ ಇನ್ನೊಂದು ವಿಡಿಯೋ ವೈರಲ್ ಆಗಿತ್ತು. ಸುಮಾರು 10 ಲಕ್ಷ ಜನರು ಈ ವಿಡಿಯೋ ನೋಡಿದ್ದರು. 90,000 ಜನರು ಇದನ್ನು ಇಷ್ಟಪಟ್ಟಿದ್ದರು. ಆ ವಿಡಿಯೋ ಲಿಂಕ್ ಈ ಕೆಳಗಿದೆ.
ಮೊದಲಿಗೆ ಈ ಹುಡುಗಿಯೊಂದೇ ನಾಯಿಯ ಸ್ನೇಹ ಬೆಳೆಸಿದೆ. ನಂತರ ತನ್ನೊಂದಿಗೆ ಇನ್ನಷ್ಟು ಮಕ್ಕಳನ್ನು ಕರೆದುಕೊಂಡು ಬಂದಿದೆ. ಹೀಗೆ ಈ ಮಕ್ಕಳು ಮತ್ತು ನಾಯಿಯ ಮಧ್ಯೆ ಮಧುರವಾದ ಸ್ನೇಹ ಅರಳಿದೆ. ಆಪ್ತವಾದ ಈ ವಿಡಿಯೋಗಳನ್ನು ನೋಡಿದ ಅನೇಕರು ಮನದುಂಬಿ ಪ್ರತಿಕ್ರಿಯಿಸಿದ್ದಾರೆ. ನಾಯಿಗಳಾಗಲೀ, ಮಕ್ಕಳಾಗಲೀ ಎಂದೂ ನಿಮ್ಮ ಆರ್ಥಿಕ ಸ್ಥಿತಿಯಿಂದ ನಿಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾರವು. ಈ ಮಕ್ಕಳಿಗೂ ನಾಯಿಗೂ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ ಹಲವಾರು ಜನ. ಮುಗ್ಧಜೀವಗಳಿಗೆ ಪ್ರೀತಿಯೊಂದೇ ಸೇತುವೆ. ನೀವೇನಂತೀರಿ?