ಕರ್ನಾಟಕಕ್ಕೆ ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವಾಗಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಈ ವಿಚಾರವನ್ನು ಕೇಂದ್ರ ಸರ್ಕಾರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದರು.

ಕರ್ನಾಟಕದ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವೇ ಅಕ್ಕಿ ಕೊಡಬೇಕು: ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ, ಅಮಿತ್ ಶಾ ಮತ್ತು ನರೇಂದ್ರ ಮೋದಿ

ಬೆಂಗಳೂರು: ಕರ್ನಾಟಕದ ಜನರ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರವೇ ಅಕ್ಕಿ ಕೊಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjuna Kharge) ಅವರು ಹೇಳಿದ್ದಾರೆ. ಹೆಚ್ಚುವರಿ ಅಕ್ಕಿ ಪೂರೈಸಲು ಕೇಂದ್ರ ಸರ್ಕಾರ ನಿರಾಕರಣೆ ವಿಚಾರವಾಗಿ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ ಎಂದು ಟೀಕಿಸಿದರು.

ನಾವೇನು ಸುಮ್ಮನೆ ಅಕ್ಕಿ ಕೇಳುತ್ತಿಲ್ಲ, ಹಣ ಕೊಡುತ್ತೇವೆ ಎಂದು ಹೇಳಿದ ಎಐಸಿಸಿ ಅಧ್ಯಕ್ಷರು, ಜನರ ಹಿತದೃಷ್ಟಿಯಿಂದ ಅಕ್ಕಿ ಕೊಡಬೇಕಾದ ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಸಂಕಷ್ಟದಲ್ಲಿರುವ ಬೇರೆ ದೇಶಗಳಿಗೆ ನಾವು ನೆರವು ನೀಡುತ್ತೇವೆ. ಆದರೆ ಇಲ್ಲಿನ ಜನರಿಗೆ ಕೊಡಲಿಲ್ಲ ಅಂದರೆ ಹೇಗೆ ಅಂತ ಪ್ರಶ್ನಿಸಿದರು.

ಲೋಕಸಭೆ ಚುನಾವಣೆಗೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು: ಖರ್ಗೆ

ಬಿಹಾರದ ಪಾಟ್ನಾದಲ್ಲಿ ವಿಪಕ್ಷಗಳ ನಾಯಕರಿಂದ ಸಭೆ ನಡೆಸಿದ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ಚುನಾವಣೆಗೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದರು. ಅಲ್ಲದೆ, ವಿಪಕ್ಷಗಳ ಮುಂದಿನ ಸಭೆಯನ್ನು ಶಿಮ್ಲಾದಲ್ಲಿ ಮಾಡಲಿದ್ದೇವೆ. ಯಾವ ರೀತಿ ಹೊಂದಾಣಿಕೆ ಆಗಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ಕಾಂಗ್ರೆಸ್ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನಡುವೆ ಅಕ್ಕಿ ವಿಚಾರದಲ್ಲಿ ಜಟಾಪಟಿ ನಡೆಯುತ್ತಿದೆ. ಈಗಾಗಲೇ ರಾಜ್ಯಕ್ಕೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿರುವ ಕೇಂದ್ರ ಸರ್ಕಾರ, ಹೆಚ್ಚುವರಿ ಅಕ್ಕಿಯನ್ನು ಕೊಡಲು ಸಾಧ್ಯವಿಲ್ಲ ಎಂದಿದೆ. ಬದಲಾಗಿ ಜನರಿಗೆ ಅಕ್ಕಿ ಶೀಘ್ರವಾಗಿ ತಲುಪುವಂತೆ ಮಾಡಲು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ನಿರ್ಧರಿಸಿದೆ.

ಇನ್ನೊಂದೆಡೆ, ಹೆಚ್ಚುವರಿ ಅಕ್ಕಿಗಾಗಿ ಕೇಂದ್ರ ಸರ್ಕಾರದ ಮೇಲೆ ರಾಜ್ಯದ ಕಾಂಗ್ರೆಸ್ ನಾಯಕರು ಒತ್ತಡ ಹಾಕುವ ತಂತ್ರಗಾರಿಕೆಯನ್ನು ಮುಂದುವರಿಸಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಆಹಾರ ಸಚಿವರು ಅವರು ದೆಹಲಿಗೆ ತೆರಳಿ ನಿರಾಸೆಯಿಂದಲೇ ವಾಪಸ್ ಆಗಿದ್ದಾರೆ. ಅಲ್ಲದೆ, ರಾಜ್ಯದ ಜನರಿಗೆ ನೀಡಿರುವ 10 ಕೆಜಿ ಉಚಿತ ಅಕ್ಕಿಯ ಭರವಸೆಯನ್ನು ಈಡೇರಿಸಲು ಬೇರೆ ರಾಜ್ಯಗಳೊಂದಿಗೂ ಮಾತುಕತೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *