ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಿಎಂಟಿಸಿ ಸೇರಿದಂತೆ ‌ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ವಳವಾಗಿದ್ದು ಇರೋ ಬಸ್ಸುಗಳು ಸಾಲದೆ ಡ್ರೈವರ್ ಕಂಡಕ್ಟರ್​ಗಳು ಪರದಾಡುವಂತಾಗಿದೆ.

ಬೆಂಗಳೂರು: ಕಾಂಗ್ರೆಸ್ ಸರ್ಕಾರ(Congress) ಅಧಿಕಾರಕ್ಕೆ ಬರುತ್ತಿದ್ದಂತೆ ಮಹಿಳೆಯರಿಗೆ ಉಚಿತ ಬಸ್ ಸೇವೆ ಒದಗಿಸುವ ಶಕ್ತಿ ಯೋಜನೆ(Free Bus Travel For Women Scheme) ಘೋಷಣೆ ಮಾಡಿತು. ಇಂದಿಗೆ ಒರೋಬ್ಬರಿ 15 ದಿನ ಕಳೆದಿದ್ದು ಕೋಟ್ಯಾಂತರ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಸರ್ಕಾರಿ ಬಸ್​ಗಳನ್ನು ಬಳಸುತ್ತಿದ್ದು ಭಾರೀ ಅನಾಹುತಗಳು ಸಂಭವಿಸುತ್ತಿವೆ. ಬಸ್​ಗಳಿಗಾಗಿ ಹೆಣ್ಮಕ್ಳು ಮುಗಿಬಿದ್ದಿದ್ದಾರೆ. ಸೀಟಿಗಾಗಿ ಜಗಳಗಳಾಗುತ್ತಿವೆ. ರಾಜ್ಯದಲ್ಲಿರುವ ‌ಸಾರಿಗೆ ನಿಗಮದ ಬಸ್ಸುಗಳು ಸಾಲುತ್ತಿಲ್ಲ. ಹೀಗಾಗಿ ನಾಲ್ಕೂ ಸಾರಿಗೆ ನಿಗಮಕ್ಕೆ ನಾಲ್ಕು ಸಾವಿರ ಹೊಸ ಬಸ್​ ಖರೀದಿಗೆ ಚಿಂತನೆ ನಡೆದಿದೆ.

ನಾಲ್ಕು ‌ಸಾರಿಗೆ ನಿಗಮಕ್ಕೆ ಬರಲಿದೆ ನಾಲ್ಕು ಸಾವಿರ ಹೊಸ ಬಸ್

ಕೆಎಸ್​ಆರ್​ಟಿಸಿಯಲ್ಲಿ ಈಗಾಗಲೇ 8116 ಬಸ್ಸುಗಳಿವೆ. ಬಿಎಂಟಿಸಿಯಲ್ಲಿ 6688, ವಾಯುವ್ಯ ಸಾರಿಗೆಯಲ್ಲಿ 4858 ಬಸ್ಸುಗಳು ಹಾಗೂ ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 4327 ಬಸ್​ಗಳಿವೆ. ಅಂದ್ರೆ ಒಟ್ಟು ನಾಲ್ಕು ಸಾರಿಗೆ ನಿಗಮದಿಂದ 23,986 ಬಸ್ಸುಗಳಿವೆ. ಆದರೆ ರಾಜ್ಯದ ಪ್ರಯಾಣಿಕರ ಸಂಖ್ಯೆಗೆ ಹೋಲಿಸಿದರೆ ಇಷ್ಟು ಬಸ್ಸುಗಳು ಸಾಲುವುದಿಲ್ಲ. ಅಲ್ಲದೆ ಈಗಾಗಲೇ ನಾಲ್ಕು ನಿಯಮಗಳಲ್ಲಿ ಹತ್ತು ಲಕ್ಷಕ್ಕಿಂತ ಹೆಚ್ಚು ಕಿಮೀ ಸಂಚಾರ ಮಾಡಿರುವ ಬಸ್ಸುಗಳಿವೆ. ಆರ್​ಟಿಓ ರೂಲ್ಸ್ ಪ್ರಕಾರ ಬಸ್ಸುಗಳು 8 ರಿಂದ 10 ಲಕ್ಷ ಕಿಮೀ ಮಾತ್ರ ಸಂಚಾರ ಮಾಡಬೇಕು. ‌ಅದರ ಮೇಲೆ ಮಾಡಿದ್ರೆ ಅದನ್ನು ಗುಜರಿಗೆ ಹಾಕಬೇಕು. ಆದರೆ ನಾಲ್ಕು ನಿಗಮಗಳಲ್ಲಿ ಸುಮಾರು 3 ರಿಂದ 4 ಸಾವಿರ ಹಳೆಯ ಬಸ್ಸುಗಳಿದ್ದು ಅವುಗಳನ್ನು ಗುಜರಿಗೆ ಹಾಕಿ ಮತ್ತೆ ಹೊಸದಾಗಿ ನಾಲ್ಕು ಸಾವಿರ ಬಸ್ಸುಗಳನ್ನು ಸೇರಿಸಲು ತಯಾರಿ ನಡೆದಿದೆ.

ಇನ್ನು ಈ ವರ್ಷದಲ್ಲಿ ನಾಲ್ಕು ಸಾರಿಗೆ ನಿಗಮಗಳ ಪೈಕೆ 95% ನಾರ್ಮಲ್ ಹೊಸ ಬಸ್​ಗಳು ಬರಲಿದ್ದು ಮಿಕ್ಕ 5 % ಮಲ್ಟಿ ಆಕ್ಸೆಲ್ ಹಾಗೂ ಡಬಲ್ ಡೆಕ್ಕರ್ ಬಸ್​ಗಳು ಬರಲಿವೆ. ಇದರಲ್ಲಿ ಬಹುಪಾಲು ಬಿಎಂಟಿಸಿ, ಕೆಎಸ್ಆರ್ಟಿಸಿ ನಿಗಮಕ್ಕೆ ಸೇರಲಿವೆ. ಜೊತೆಗೆ ಮತ್ತೊಂದೆಡೆ ಸಾರಿಗೆ ಮುಖಂಡ ಅನಂತ್ ಸುಬ್ಬರಾವ್ ಪ್ರತಿಕ್ರಿಯೆ ನೀಡಿದ್ದು ಹೊಸ ಬಸ್​ಗಳು ಬರ್ತಿರೋದು ಸಂತೋಷದ ವಿಷಯ ಆದರೆ ಬಸ್ ಓಡಿಸಲು ಕಂಡಕ್ಟರ್ ಡ್ರೈವರ್ ಬೇಕು. ಹಾಗಾಗಿ ಮೊದಲು ನೇಮಕಾತಿ ಪ್ರಕ್ರಿಯೆ ಆರಂಭ ಮಾಡಲಿ. ಇಲ್ಲಾಂದ್ರೆ ನಿಗಮವನ್ನು ನಡೆಸುವುದು ಕಷ್ಟ ಆಗುತ್ತದೆ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಒಟ್ನಲ್ಲಿ ಇತ್ತ ಶಕ್ತಿ ಯೋಜನೆ ಜಾರಿಯಾಗಿದ್ದೆ ತಡ ರಾಜ್ಯದಲ್ಲಿ ಕೆಎಸ್ಆರ್ಟಿಸಿ ಬಿಎಂಟಿಸಿ ಸೇರಿದಂತೆ ‌ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಹೆಚ್ವಳವಾಗಿದ್ದು ಇರೋ ಬಸ್ಸುಗಳು ಸಾಲದೆ ಡ್ರೈವರ್ ಕಂಡಕ್ಟರ್​ಗಳು ಪರದಾಡುವಂತಾಗಿದೆ.

Leave a Reply

Your email address will not be published. Required fields are marked *