Banks to Lend Additional Fund To Go First: ಹಣಕಾಸು ಸಂಕಷ್ಟಕ್ಕೆ ಸಿಲುಕಿರುವ ಗೋಫಸ್ಟ್ ಏರ್​ಲೈನ್ಸ್ ಸಂಸ್ಥೆಗೆ ಚೇತರಿಕೆ ಕೊಡುವ ನಿಟ್ಟಿನಲ್ಲಿ ನಾಲ್ಕು ಬ್ಯಾಂಕುಗಳು 400ರಿಂದ 450 ಕೋಟಿ ರೂನಷ್ಟು ಹೆಚ್ಚುವರಿ ಸಾಲ ಕೊಡಲು ಒಪ್ಪಿಕೊಂಡಿವೆ.

ನವದೆಹಲಿ: ನಷ್ಟಗೊಂಡು ದಿವಾಳಿ ಅಂಚಿಗೆ ಹೋಗಿದ್ದ  ಸಂಸ್ಥೆಗೆ (Go First Airlines) ಹೆಚ್ಚುವರಿ ಧನಸಹಾಯ ಒದಗಿಸಲು ಬ್ಯಾಂಕುಗಳು ಒಪ್ಪಿಕೊಂಡಿವೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡ್ಯೂಶೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕುಗಳನ್ನು ಒಳಗೊಂಡಿರುವ ಸಾಲ ನೀಡುಗರ ಸಮಿತಿ (Committee of Creditors) ಗೋಫಸ್ಟ್ ಸಂಸ್ಥೆಯ ಹೆಚ್ಚುವರಿ ಧನಸಹಾಯದ ಕೋರಿಕೆಗೆ ಶನಿವಾರ ಅನುಮೋದನೆ ಕೊಟ್ಟಿವೆ. ಸುಮಾರು 400ರಿಂದ 450 ಕೋಟಿ ರೂ ಮೊತ್ತವು ಗೋಫಸ್ಟ್​ಗೆ ಲಭಿಸುವ ಸಾಧ್ಯತೆ ಇದೆ ಎಂದು ಮನಿಕಂಟ್ರೋಲ್ ವೆಬ್​ಸೈಟ್ ವರದಿ ಮಾಡಿದೆ. ಇದರೊಂದಿಗೆ ಏರ್​ಲೈನ್ಸ್ ಸಂಸ್ಥೆ ಬೀಸೋ ದೊಣ್ಣೆಯಿಂದ ಪಾರಾಗಲು ಇದು ಸಾಕಾಗಬಹುದು.

ಗೋ ಫಸ್ಟ್ ಏರ್​ಲೈನ್ಸ್ ಸಂಸ್ಥೆಯ ವ್ಯವಹಾರ ಯೋಜನೆ ಮತ್ತು ಅದರ ವಿಮಾನಗಳ ಮರು ಹಾರಾಟದ ಉದ್ದೇಶವನ್ನು ಆಧರಿಸಿ ಬ್ಯಾಂಕುಗಳ ಗುಂಪು 400 ಕೋಟಿ ರೂ ಹೆಚ್ಚುವರಿ ಸಾಲ ಕೊಡಲು ಒಪ್ಪಿಕೊಂಡಿವೆ ಎಂದು ಈ ಗುಂಪಿನಲ್ಲಿರುವ ಒಂದು ಬ್ಯಾಂಕ್​ನ ಅಧಿಕಾರಿಯೊಬ್ಬರು ತಮಗೆ ಮಾಹಿತಿ ನೀಡಿದ್ದಾಗಿ ಮನಿಕಂಟ್ರೋಲ್ ವರದಿ ಮಾಡಿದೆ. ಈ ವರದಿಯಲ್ಲಿ ಇನ್ನೊಂದು ಮೂಲದಿಂದಲೂ ಬೆಳವಣಿಗೆ ದೃಢಪಟ್ಟಿರುವುದಾಗಿ ಈ ವರದಿ ಹೇಳಿದೆ. ಸದ್ಯಕ್ಕೆ ಬ್ಯಾಂಕುಗಳು ಗೋಫಸ್ಟ್ ಏರ್​ಲೈನ್ಸ್​ಗೆ 400ರಿಂದ 450 ಕೋಟಿ ರೂ ಸಾಲ ಕೊಡಲು ಒಪ್ಪಿಕೊಂಡಿವೆ. ಮುಂದೆ ಅಗತ್ಯ ಬಿದ್ದಲ್ಲಿ ಮತ್ತು ಸಮಂಜಸ ಎನಿಸಿದಲ್ಲಿ ಇನ್ನಷ್ಟು ಸಾಲಕ್ಕೂ ಈ ಬ್ಯಾಂಕುಗಳು ಸಿದ್ಧ ಇವೆ ಎಂದು ಹೇಳಲಾಗುತ್ತಿದೆ.

ಡಿಜಿಸಿಎಯಿಂದ ಗೋಫಸ್ಟ್​ಗೆ ಅನುಮತಿ ಸಿಗುತ್ತಾ?

ಗೋಫಸ್ಟ್ ಹಣಕಾಸು ಬಿಕ್ಕಟ್ಟಿಗೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಅದರ ವಿಮಾನ ಹಾರಾಟಕ್ಕೆ ಡಿಜಿಸಿಎ ನಿರ್ಬಂಧ ಹಾಕಿತ್ತು. ಇದೀಗ ಬ್ಯಾಂಕುಗಳ ಗೋಫಸ್ಟ್​ಗೆ ಹೆಚ್ಚುವರಿ ಸಾಲ ಕೊಡಲು ಮುಂದಾಗಿರುವ ಹಿನ್ನೆಲೆಯಲ್ಲಿ ವಿಮಾನ ಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಮುಂದಿನ ನಿರ್ಧಾರ ಏನು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲ ಮೂಡಿಸಿದೆ. ಗೋಫಸ್ಟ್ ಏರ್​ಲೈನ್ಸ್​ಗೆ ಮತ್ತೆ ವಿಮಾನ ಹಾರಾಟ ಆರಂಭಿಸುವ ಅನುಮತಿ ಸಿಗುತ್ತದಾ ಎಂಬುದು ಪ್ರಶ್ನೆ.

ಗೋಫಸ್ಟ್ ಸಂಸ್ಥೆ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಡ್ಯೂಷೆ ಬ್ಯಾಂಕ್ ಮತ್ತು ಐಡಿಬಿಐ ಬ್ಯಾಂಕುಗಳಿಂದ ಒಟ್ಟು 6,521 ಕೋಟಿ ರೂ ಸಾಲ ಉಳಿಸಿಕೊಂಡಿದೆ. ಇದರಲ್ಲಿ ಐಡಿಬಿಐ ಬಿಟ್ಟು ಉಳಿದ ಬ್ಯಾಂಕುಗಳು ಒಂದು ಸಾವಿರ ಕೋಟಿ ರೂಗಿಂತಲೂ ಹೆಚ್ಚು ಮೊತ್ತದ ಸಾಲವನ್ನು ಗೋಫಸ್ಟ್​ನಿಂದ ವಸೂಲಿ ಮಾಡಬೇಕಿದೆ.

ಇದರ ಜೊತೆಗೆ, ವಿಮಾನಗಳನ್ನು ಗುತ್ತಿಗೆ ಕೊಟ್ಟ ಸಂಸ್ಥೆಗಳಿಗೂ ಗೋಫಸ್ಟ್ ಹಣ ಪಾವತಿ ಮಾಡಿಲ್ಲ. ಈ ವಿಮಾನಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲು ಆ ಕಂಪನಿಗಳು ಪ್ರಯತ್ನಿಸಿದ್ದೂ ಆಗಿದೆ.

Leave a Reply

Your email address will not be published. Required fields are marked *