ಲೋಕಾಯುಕ್ತ ದಾಳಿ ವೇಳೆ ನಕ್ಷತ್ರ ಆಮೆ ಪತ್ತೆ..
ಲೋಕಾಯುಕ್ತ ದಾಳಿ ವೇಳೆ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಮನೆಯಲ್ಲಿ ನಕ್ಷತ್ರ ಆಮೆಗಳು ಪತ್ತೆಯಾಗಿವೆ.
ಬಾಗಲಕೋಟೆ: ಲೋಕಾಯುಕ್ತ ದಾಳಿ ಸಮಯದಲ್ಲಿ ಲಕ್ಷಾಂತರ ರೂಪಾಯಿ ನಗದಿನ ಜೊತೆಗೆ ಎರಡು ನಕ್ಷತ್ರ ಆಮೆ ಅಧಿಕಾರಿಗಳ ಮನೆಯಲ್ಲಿ ಪತ್ತೆಯಾಗಿವೆ. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಆಗಿರುವ ಚೇತನಾ ಪಾಟೀಲ ಅವರ ಮನೆಯ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿತ್ತು.
ದಾಖಲೆ ಹಾಗೂ ನಗದು ಹಣ ಪರಿಶೀಲನೆ ಮಾಡುವ ವೇಳೆ ಲಕ್ಷಾಂತರ ರೂಪಾಯಿ ನಗದು ಹಾಗೂ ಎರಡು ಆಮೆ ಪತ್ತೆಯಾಗಿವೆ. ಮನೆಯಲ್ಲಿ ಹಲವು ದಿನಗಳಿಂದ ಆಮೆ ಸಾಕಿದ್ದರು ಎನ್ನಲಾಗಿದೆ. ಅರಣ್ಯ ಕಾಯ್ದೆ ಅಡಿ ಪ್ರಾಣಿಗಳು ಸಾಕುವುದು ನಿಷೇಧ ಇದ್ದರೂ ಸಹ, ಸರ್ಕಾರಿ ಅಧಿಕಾರಿಯಾಗಿ ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.
ಬೀಳಗಿ ಪಟ್ಟಣದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಶಿರೂರು ಅವರ ವಿದ್ಯಾಗಿರಿಯಲ್ಲಿರುವ ಮನೆ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು ಎರಡು ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಈ ವೇಳೆ, ಪ್ರಮುಖ ದಾಖಲೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಡಿವೈಎಸ್ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ದಾಳಿ ನಡೆಸಲಾಗಿದೆ.
ಅಧಿಕಾರಿಗಳ ಮನೆಗಳ ಜೊತೆಗೆ ಕಚೇರಿಗಳ ಮೇಲೂ ದಾಳಿ ಮಾಡಿ, ಸಿಬ್ಬಂದಿಗಳ ವಿಚಾರಣೆ ಹಾಗೂ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಾಗಲಕೋಟೆ, ಬೀಳಗಿ ಕಚೇರಿಗಳ ಮೇಲೂ ದಾಳಿ ಮಾಡಲಾಗಿದೆ. ವಿದ್ಯಾಗಿರಿಯ 18ನೆ ಕ್ರಾಸ್ ನಲ್ಲಿರುವ ಕೃಷ್ಣ ಶಿರೂರು ಮನೆ ಹಾಗೂ ವಿದ್ಯಾಗಿರಿಯ ಅಕ್ಕಿಮರಡಿ ಲೇ ಔಟ್ನಲ್ಲಿರುವ ಚೇತನಾ ಪಾಟೀಲ ಮನೆ ಮೇಲೆ ದಾಳಿ ಈ ನಡೆದಿದೆ.