ಮತದಾನದ ಗುರುತಿನ ಚೀಟಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ. ಆದರೆ ಸ್ವಯಂ ಪ್ರೇರಿತರಾಗಿ ಲಿಂಕ್ ಮಾಡಿಕೊಂಡರೆ ಒಳ್ಳೆಯದು ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಬೆಂಗಳೂರಿನಲ್ಲಿ ಶುಕ್ರವಾರ ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಈ ವಿಷಯ ತಿಳಿಸಿದ್ದು, ಈವರೆಗೆ ರಾಜ್ಯದಲ್ಲಿ ಶೇ.60ರಷ್ಟು ಆಧಾರ್ ಕಾರ್ಡ್ ಜೊತೆಗೆ ಗುರುತಿನ ಚೀಟಿ ಲಿಂಕ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗೆ ಕಿವಿ ಕೊಡಬಾರದು. ಮತದಾರರ ಮರಣ, ಸ್ಥಳಾಂತರ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮತದಾರರ ಪಟ್ಟಿಯಿಂದ 3.89 ಲಕ್ಷ ಮತದಾರರನ್ನು ತೆಗೆದು ಹಾಕಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
1.27 ಲಕ್ಷ ಮತದಾರರು ಮರಣ ಹೊಂದಿದ್ದರೆ, 2.38 ಲಕ್ಷ ಮತದಾರರು ಸ್ಥಳಾಂತರಗೊಂಡಿದ್ದಾರೆ. 1,553 ಮತದಾರರನ್ನು ಇತರೆ ಕಾರಣಗಳಿಂದ ಮತದಾರರ ಪಟ್ಟಿಯಿಂದ ಹೆಸರು ರದ್ದುಗೊಳಿಸಲಾಗಿದೆ ಎಂದು ಚುನಾವಣಾಧಿಕಾರಿ ವಿವರಿಸಿದರು.