ಬೆಂಗಳೂರು: ಕರ್ನಾಟಕ ಏಕೀಕರಣಗೊಂಡು 50 ವರ್ಷವಾಗಿರುವ ಹಿನ್ನಲೆಯಲ್ಲಿ ಕ್ರೈಸ್ತ ಸಮುದಾಯ ವಿಶೇಷವಾದ ಆಚರಣೆಯೊಂದಕ್ಕೆ ಕೈ ಹಾಕಿದೆ. ಇದು ಬೆಂಗಳೂರಿನ ಕ್ರೈಸ್ತ ಸಮುದಾಯದ ಹೆಸರಲ್ಲಿ ವಿಶೇಷವಾದ ಪ್ರಯತ್ನ ಎಂದರೂ ತಪ್ಪಾಗಲಿಕ್ಕಿಲ್ಲ.
ಒಂದು ದಿನವಾದ್ರೂ ಎಲ್ಲಾ ಚರ್ಚ್ ಗಳಲ್ಲಿ ಕನ್ನಡದಲ್ಲೇ ಪೂಜೆಗಳು ನಡೆಯಬೇಕೆನ್ನುವ ಬಹು ವರ್ಷಗಳ ಬೇಡಿಕೆ ಈಡೇರುವ ನಿಟ್ಟಿನಲ್ಲಿನ ಈ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ವ್ಯಕ್ತವಾಗಿದೆ. ನವೆಂಬರ್ 1 ರ ದಿನ ರಾಜ್ಯದ ಎಲ್ಲಾ ಚರ್ಚ್ ಗಳಲ್ಲೂ ಕಡ್ಡಾಯವಾಗಿ ಕನ್ನಡದಲ್ಲೇ ಪೂಜೆಗಳನ್ನು ನಡೆಸಿಕೊಡುವಂತೆ ಮಹಾಧರ್ಮಾಧ್ಯಕ್ಷ ಡಾ. ಪೀಟರ್ ಮಚಾಡೋ ಆದೇಶವನ್ನೇ ಹೊರಡಿಸಿದ್ದಾರೆ.
ಕರ್ನಾಟಕ ಉದಯವಾಗಿ 50 ವರ್ಷ ತುಂಬುತ್ತಿದೆ.ಈ ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಲು, ಅವಿಸ್ಮರಣೀಯಗೊಳಿಸಲು ಸರ್ಕಾರ ತನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡುತ್ತಿದೆ. ವರ್ಷಪೂರ್ತಿ ಕನ್ನಡವನ್ನು ಸಂಭ್ರಮಿಸಲು ನಿರ್ದರಿಸಿಕೊಂಡಿದೆ.ಇದರ ಭಾಗವಾಗೇ ಕ್ರೈಸ್ತ ಮಹಾಧರ್ಮಸಭೆ ನವೆಂಬರ್ 1 ರಂದು ಕಡ್ಡಾಯವಾಗಿ ಕನ್ನಡದಲ್ಲೇ ಪೂಜೆ ನಡೆಸಿಕೊಡಬೇಕೆನ್ನುವ ಫರ್ಮಾನನ್ನು ಎಲ್ಲಾ ಚರ್ಚ್ ಗಳ ಗುರುಗಳಿಗೂ ಹೊರಡಿಸಿದೆ.ಅವತ್ತಿನ ದಿನದ ಪೂಜೆಯನ್ನು ಕನ್ನಡದಲ್ಲೇ ನಡೆಸಿಕೊಡಬೇಕೆನ್ನುವುದು ಈ ಸುತ್ತೋಲೆಯ ಸಾರಾಂಶ.
ಚರ್ಚ್ ಗಳಲ್ಲಿ ಸಹಜವಾಗಿ ಕನ್ನಡದ ಜತೆಗೆ ಕೊಂಕಣಿ, ತಮಿಳು, ತೆಲುಗು,ಮಲಯಾಳಂ ಹಾಗೂ ಇಂಗ್ಲೀಷ್ ನಲ್ಲಿ ಪೂಜೆ ನಡೆಸಿಕೊಡಲಾಗುತ್ತಿದೆ.ಕನ್ನಡಕ್ಕೆ ಪೈಪೋಟಿ ಕೊಡುವ ಮಟ್ಟದಲ್ಲಿ ಇತರೆ ಪ್ರಾದೇಶಿಕ ಭಾಷೆಗಳು ಪೈಪೋಟಿ ನೀಡುತ್ತಿವೆ.ಕನ್ನಡ ಇತರೆ ಭಾಷೆಗಳ ಪೈಪೋಟಿ ಎದುರಿಸಲಿಕ್ಕಾಗದೆ ಸೊರಗಿ ಹೋಗುತ್ತಿದೆ.ಬೆಂಗಳೂರಿನಂಥ ಮಹಾನಗರದಲ್ಲಿ ಕನ್ನಡ ಭಾಷಾ ಧರ್ಮಗುರುಗಳು ಇತರೆ ಭಾಷೆಗಳ ಧರ್ಮಗುರುಗಳ ಮುಂದೆ ಮೊಣಕಾಲೂರುವಂಥ ಸ್ಥಿತಿ ನಿರ್ಮಾಣವಾಗಿದೆ.
ಕನ್ನಡದಲ್ಲಿ ಪೂಜೆ ನಡೆಸಿಕೊಟ್ಟರೆ ಚರ್ಚ್ ಗೆ ಬಾರದೆ ಪ್ರತಿಭಟಿಸುವ ಅನ್ಯ ಭಾಷೆಯ ಕ್ರೈಸ್ತರಿದ್ದಾರೆ.ಕರ್ನಾಟಕವೇ ಅಲ್ಪಸಂಖ್ಯಾತರ ಭಾಷೆಯಾಗುತ್ತಿದೆಯಾ ಎನ್ನುವ ಅನುಮಾನ ಕಾಡುತ್ತದೆ.ಹಾಗಾಗಿಯೇ ಭಾನುವಾರ ಸೇರಿದಂತೆ ಇತರೆ ದಿನಗಳಲ್ಲಿ ಕನ್ನಡದ ಜತೆಗೆ ಇತರೆ ಪ್ರಾದೇಶಿಕ ಬಾಷೆಗಳಲ್ಲಿ ಪೂಜೆ ನಡೆಸಬೇಕೆನ್ನುವ ಆದೇಶವೂ ದೊಡ್ಡವರಿಂದ ಹೊರಬಿದ್ದಿದೆ.
ಇಂಥಾ ಸನ್ನಿವೇಶದಲ್ಲಿ ಕ್ರೈಸ್ತ ಮಹಾಧರ್ಮಾಧ್ಯಕ್ಷರಾದ ಡಾ. ಪೀಟರ್ ಮಚಾಡೋ ಹೊಸ ಕ್ರಾಂತಿಕಾರಿ ಹೆಜ್ಜೆ ಇರಿಸಲಿಕ್ಕೆ ಮುಂದಾಗಿರುವುದು ಸಂತಸದ ವಿಚಾರ ಎನ್ನಲಾಗುತ್ತಿದೆ. ನವೆಂಬರ್ 1 ರಂದು ಕನ್ನಡವನ್ನು ಬಿಟ್ಟರೆ ಬೇರೆ ಭಾಷೆಗಳಲ್ಲಿ ಪೂಜೆ ನಡೆಸುವಂತಿಲ್ಲ ಎಂದು ಆದೇಶಿಸಿರುವುದು ಕನ್ನಡದ ಅಸ್ಮಿತೆಯನ್ನು ಎತ್ತಿಹಿಡಿದಂತಾಗಿದೆ. ಇದಕ್ಕೆ ಕನ್ನಡಪರ ಸಂಘಟನೆಗಳು ಸಂತಸ ವ್ಯಕ್ತಪಡಿಸಿವೆ.
ಕನ್ನಡ ಕಥೋಲಿಕ ಕ್ರೈಸ್ತ ಸಂಘ ಅಭಿನಂದನೆ: ಕನ್ನಡ ಭಾಷೆಯ ಉಳಿವಿಗೆ ದೊಡ್ಡ ಮಟ್ಟದ ಸಂಘರ್ಷವೇ ನಡೆಯಬೇಕಾದಂತ ಸನ್ನಿವೇಶವಿರುವ ಸಂದರ್ಭದಲ್ಲಿ ನವೆಂಬರ್ 1 ರಂದು ಕಡ್ಡಾಯವಾಗಿ ಎಲ್ಲಾ ಚರ್ಚ್ ಗಳು ಕನ್ನಡದಲ್ಲೇ ಪೂಜೆ ನೀಡಬೇಕೆನ್ನುವ ಆದೇಶವನ್ನು ಹೊರಡಿಸಿರುವ ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೋ ಅವರ ಧೈರ್ಯ ಹಾಗೂ ಸಾಹಸವನ್ನು ಕನ್ನಡ ಕಥೋಲಿಕ ಕ್ರೈಸ್ತ ಸಂಘ ಅಭಿನಂದಿಸಿದೆ.
ಅನ್ಯಭಾಷೆಗಳಿಂದ ಎದುರಾಗಬಹುದಾದ ವಿರೋಧವನ್ನು ಲೆಕ್ಕಿಸದೆ ಕನ್ನಡಕ್ಕೆ ಪ್ರಾಶಸ್ತ್ಯ ನೀಡಬೇಕೆಂದು ಆದೇಶಿಸಿರುವುದು ನಿಜಕ್ಕೂ ಕ್ರಾಂತಿಕಾರಿ ಹೆಜ್ಜೆ. ಇಂಥ ಐತಿಹಾಸಿಕ ನಿರ್ದಾರಗಳು ಆಯಾ ಕಾಲಘಟ್ಟದಲ್ಲಿ ಬಂದಿದ್ದರೆ ಕನ್ನಡಕ್ಕೆ ಇಂದು ಚರ್ಚ್ ಗಳಲ್ಲಿ ಅನಾಥಪ್ರಜ್ಞೆ ಕಾಡುತ್ತಿರಲಿಲ್ಲವೇನೋ..ಅದೇನೇ ಆಗಲಿ ಡಾ.ಪೀಟರ್ ಮಚಾಡೋ ಅವರ ನಿರ್ದಾರ ಸ್ವಾಗತಾರ್ಹ ಎಂದು ಕನ್ನಡ ಕಥೋಲಿಕ ಕ್ರೈಸ್ತ ಸಂಘದ ರಫಾಯಲ್ ರಾಜ್ ತಿಳಿಸಿದ್ದಾರೆ.