ಧಾರವಾಡ: ನಿರಂತವಾಗಿ ಸುರಿಯುತ್ತಿರುವ ಮಳೆಯಿಂದ ಪಕ್ಕದ ಮನೆಯ ಗೋಡೆಯೊಂದು ಟೆಂಟ್ ಮೇಲೆ ಬಿದ್ದ ಪರಿಣಾಮ, ಟೆಂಟ್ ನಲ್ಲಿದ್ದ ಓರ್ವ ವ್ಯಕ್ತಿ ಮೃತಪಟ್ಟು, ಇಬ್ಬರು ಮಹಿಳೆಯರು ಗಾಯಗೊಂಡ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರಂತವಾಗಿ ಮಳೆ ಸುರಿಯುತ್ತಿದ್ದು, ಇದರ ಪರಿಣಾಮವಾಗಿ ಹಳೆಯ ಮನೆಯೊಂದರ ಗೋಡೆ ಪಕ್ಕದಲ್ಲಿದ್ದ ಟೆಂಟ್ ಮೇಲೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ರಾತ್ರಿ ನಡೆದಿದೆ. ಯಲ್ಲಪ್ಪ ರಾಮಪ್ಪ ಹಿಪ್ಪಿನವರ ಎಂಬಾತನೇ ಮೃತಪಟ್ಟ ದುರ್ದೈವಿ. ಈತನ ಪತ್ನಿ ಹನುಮವ್ವ ಮತ್ತು ಮಗಳು ಯಲ್ಲವ್ವ ತೀವ್ರವಾಗಿ ಗಾಯಗೊಂಡಿದ್ದರು. ಯಲ್ಲಪ್ಪನ ಮನೆಯೂ ಸೋರುತ್ತಿರೋ ಕಾರಣ, ಅದೇ ಮನೆ ಪಕ್ಕ ಟೆಂಟ್ ಹಾಕಿಕೊಂಡು ವಾಸ ಮಾಡುತ್ತಿದ್ದರು. ಆದರೆ ಟೆಂಟ್ ಗೆ ಹೊಂದಿಕೊಂಡೇ ಇದ್ದ ಇನ್ನೊಂದು ಬದಿಯ ಪಕ್ಕದ ಮನೆಯ ಗೋಡೆ ಇವರ ಟೆಂಟ್ ಮೇಲೆ ಕುಸಿದಿದೆ. ಕುಸಿದ ಗೋಡೆಯ ಅವಶೇಷಗಳಡಿಯಲ್ಲಿ ಮೂವರು ಸಿಲುಕಿದ್ದರು. ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಯಲ್ಲಪ್ಪ ಮೃತಪಟ್ಟಿದ್ದಾರೆ.
ಯಲ್ಲಪ್ಪನ ಮೇಲೆಯೇ ಹೆಚ್ಚಿನ ಪ್ರಮಾಣದಲ್ಲಿ ಗೋಡೆಯ ಅವಶೇಷ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದನ್ನು. ಹೀಗಾಗಿ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ. ಇನ್ನು ಮಗಳು ಮತ್ತು ಪತ್ನಿ ಇಬ್ಬರನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಜಿಲ್ಲಾಸ್ಪತ್ರೆಗೆ ಉಪವಿಭಾಗಾಧಿಕಾರಿ ಶಾಲಮ್ ಹುಸೇನ್ ಮತ್ತು ತಹಸೀಲ್ದಾರ ಡಾ. ಡಿ.ಎಚ್. ಹೂಗಾರ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಸರ್ಕಾರದಿಂದ ಸಿಗೋ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು.