ಮೈಸೂರು: ಮೈಸೂರು ಪ್ರವಾಸದಲ್ಲಿ ಬ್ಯುಸಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೆನ್ನೆ ಕೆಆರ್ಎಸ್ ಡ್ಯಾಂಗ್ಗೆ ಬಾಗೀನ ಅರ್ಪಿಸುವ ಕಾರ್ಯಕ್ರಮದಲ್ಲಿ ಭಾಗಿಯಾಗುವುದರ ಜೊತೆಗೆ ತಮ್ಮ ನೆಚ್ಚಿನ ಸ್ಪಾಟ್ ಆದ ಮೈಲಾರಿ ಹೋಟೆಲ್‌ಗೆ ಭೇಟಿ ನೀಡಿ ಬೆಳಗಿನ ಉಪಹಾರ ಸೇವಿಸಿದ್ದಾರೆ. ಬಳಿಕ ಮನಸಾರೆ ತೃಪ್ತಿ, ಸಮಾಧಾನವಾಯಿತೆಂದು ಹೇಳಿದ್ದಾರೆ.
ಇದಕ್ಕೆ ಸಂಬಂಧ ಪಟ್ಟಂತೆ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, “ ಏನೇ ಆದ್ರೂ ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ನೆಮ್ಮದಿ. ಈ ದಿನವೂ ಕೂಡಾ ಹಾಗೆಯೇ ಆಯಿತು” ಎಂದಿದ್ದಾರೆ. ಜೊತೆಗೆ ಸಿದ್ದರಾಮಯ್ಯನವರು ಉಪಹಾರ ಸೇವಿಸುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದು, ಹೋಟೆಲ್‌ನ ರುಚಿಯ ಬಗ್ಗೆ ನೂರಾರು ಕಮೆಂಟ್ ಹಾಕಿದ್ದಾರೆ.
ಸಿಎಂ ಸಿದ್ದು ಅವರು ಸಾಕಷ್ಟು ಬಾರಿ ಮೈಲಾರಿ ಹೋಟೆಲ್‌ಗೆ ತಾವೇ ಖುದ್ದು ಭೇಟಿ ನೀಡಿ ಹಲವು ಬಾರಿ ತಿಂಡಿ ಸವಿದಿದ್ದಾರೆ. ಈ ಹಿಂದೆಯೂ ಸಹ ಹೋಟೆಲ್ ಭೇಟಿ ನೀಡಿ ತಮ್ಮ ಕಾಲೇಜು ದಿನಗಳನ್ನು ಮೆಲಕು ಹಾಕುತ್ತಾ, ಜತೆಯಲ್ಲಿ ಬಂದ ಸಚಿವರಿಗೆ, ಅಧಿಕಾರಿಗಳಿಗೂ ಕೂಡ ಹೋಟೆಲ್ ಊಟದ ರುಚಿಯನ್ನು ತೋರಿಸಿದ್ದಾರೆ.
ಮೈಲಾರಿ ಹೋಟೆಲ್‌ನಲ್ಲಿ ಮಲ್ಲಿಗೆಯಂತಹ ಮೃದುವಾದ ದೋಸೆ ಹಾಗೂ ಇಡ್ಲಿ ಇಲ್ಲಿ ತುಂಬಾ ಫೇಮಸ್. ಪ್ರತಿ ಬಾರಿಯೂ ಬಂದಾಗಲೂ ಸಿಎಂ ಬೆಣ್ಣೆ ದೋಸೆ, ಕಾಯಿ ಚಟ್ನಿ, ಆಲೂಗಡ್ಡೆ ಈರುಳ್ಳಿ ಪಲ್ಯ, ಇಡ್ಲಿ ಚಟ್ನಿ ತುಪ್ಪವನ್ನು ಸವಿದು ಮನಸಾರೆ ತೃಪ್ತಿ ಪಡುತ್ತಾರೆ.