ಮಲಪ್ರಭಾ ನದಿಯಲ್ಲಿ ಈಗ ಪ್ರವಾಹದ ಭೀತಿ ಎದುರಾಗಿದೆ. ಹೀಗಾಗಿ ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಿನ ಹಲವು ಗ್ರಾಮಗಳಿಗೆ ಈಗ ಪ್ರವಾಹದ ಆತಂಕ ಎದುರಾಗಿದ್ದು ಈಗಾಗಲೇ ನವಿಲು ತೀರ್ಥ ಜಲಾಶಯದಿಂದ 15 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿದ್ದರಿಂದ ನದಿ ತುಂಬಿ ಹಲವು ಗ್ರಾಮಗಳ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ನೂರಾರು ಹೆಕ್ಟರ್ ಪ್ರದೇಶದಲ್ಲಿ ಬೆಳೆಗಳು ನಾಶವಾಗಿವೆ ಈ ಹಿನ್ನಲೆಯಲ್ಲಿ ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್. ಕೆ ಪಾಟೀಲ್ ಅವರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನರಗುಂದ ತಾಲೂಕಿನ ಕೊಣ್ಣೂರು, ವಾಸನ, ಲಖಮಾಪುರ ಗ್ರಾಮದಲ್ಲಿ ಪ್ರವಾಹದ ಪರಿಶೀಲನೆ ನಡೆಸಿದರು.
ಲಖಮಾಪುರ ಗ್ರಾಮದ ಕೆಲ ಮನೆಗಳಿಗೆ ನೀರು ನುಗ್ಗಿದ್ದ ಕಾರಣ ಹಸಿವು ತಣಿಸುವ ಸಲುವಾಗಿ ಕುಟುಂಬದ ಜನರಿಗೆ ತಾತ್ಕಾಲಿಕವಾಗಿ ಅಗತ್ಯ ದಿನಸಿ ಕಿಟ್ ವಿತರಿಸಿದರು. ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಪೋಲಿಸ್ ವರಿಷ್ಠಾಧಿಕಾರಿ ಬಿ. ಎಸ್ ನೇಮಗೌಡ, ಉಪ ವಿಭಾಗಾಧಿಕಾರಿ ಗಂಗಪ್ಪ ಎಂ, ಮಾಜಿ ಸಚಿವ ಬಿ. ಆರ್ ಯಾವಗಲ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿದ್ರು.