ತುಮಕೂರು: ಮಹಿಳೆಯರನ್ನು ಮತ್ತು ವೃದ್ಧರನ್ನು ನಂಬಿಸಿ ಚಿನ್ನಾಭರಣ ದೋಚುತ್ತಿದ್ದ ನಟೋರಿಯಸ್ ಕಳ್ಳನೊಬ್ಬನ್ನು ಸಿನಿಮೀಯ ರೀತಿಯಲ್ಲಿ ಕೊರಟಗೆರೆ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಂಜೇಶ್ ಅಲಿಯಾಸ್ ಮಂಜ ಅಲಿಯಾಸ್ ಚೌಟ್ರಿ ಮಂಜ ಅಲಿಯಾಸ್ ಹೊಟ್ಟೆ ಮಂಜ (40) ಎಂಬಾತನನ್ನು ಕೊರಟಗೆರೆಯ ಪೊಲೀಸರು ಬೆಂಗಳೂರಿನಲ್ಲಿ ಮಂಗಳವಾರ ಬಂಧಿಸಿದ್ದು, ಈತ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೆಸರುಘಟ್ಟ ಹೋಬಳಿಯ ಹುರುಳ ಗ್ರಾಮದ ನಿವಾಸಿಯಾಗಿದ್ದು, ಈತನಿಂದ 10 ಸಾವಿರ ರೂ. ನಗದು, 6,75,000 ಮೌಲ್ಯದ 135 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜೂನ್ 20 ರಂದು ಕೊರಟಗೆರೆ ಪಟ್ಟಣದ ಡಿಸಿಸಿ ಬ್ಯಾಂಕ್ ಹತ್ತಿರದ ಮನೆಯೊಂದರಲ್ಲಿ ಕಳ್ಳತನ ನಡೆದಿತ್ತು. ಈ ಘಟನೆ ಸಂಬಂಧ ಆರೋಪಿಯ ಪತ್ತೆಗೆ ಸಿ.ಸಿ ಟಿ.ವಿ ಕ್ಯಾಮೆರಾ ಹಾಗೂ ನಗರದ ಸ್ಮಾರ್ಟ್ ಸಿಟಿ ಕಮಾಂಡ್ ಸೆಂಟರ್‍ನಲ್ಲಿ ವಾಹನಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಯ ವಾಹನದ ಗುರುತು ಪತ್ತೆಯಾಗಿತ್ತು.

ದಾಬಸ್‍ಪೇಟೆ, ನೆಲಮಂಗಲ ಮೂಲಕ ಬೆಂಗಳೂರು ತಲುಪಿರುವುದು ತಿಳಿದು, ಬೆಂಗಳೂರಿನ ಸದಾಶಿವನಗರದ ಟ್ರಾಫಿಕ್ ಜಂಕ್ಷನ್ ಬಳಿ ಕಾನ್ ಸ್ಟೇಬಲ್ ದೊಡ್ಡಲಿಂಗಯ್ಯ ಬಚಾವಾಗಲು ಮುಂದಾದ ಆರೋಪಿಯ ದ್ವಿಚಕ್ರ ವಾಹನ ಅಡ್ಡಗಟ್ಟಿ ಬಂಧಿಸಲು ಮೂಮದಾದಾಗ, ದ್ವಚಕ್ರ ವಾಹನದಲ್ಲಿ ಪರಾರಿಯಾಗಲು ಯತ್ನಿಸಿದಾಗ ಪೇದೆ ದೊಡ್ಡಲಿಂಗಯ್ಯ ಆರೋಪಿ ಹೊಟ್ಟೆ ಮಂಜನ ಕಾಲಿಡಿದುಕೊಂಡಿದ್ದಾರೆ, ಪೇದೆಯನ್ನು 20 ಮೀಟರ್ ಎಳೆದುಕೊಂಡು ಹೋದರೂ ಆರೋಪಿಯನ್ನು ಬಿಡದೆ ಇದ್ದಾಗ ಸದಾಶಿವ ನಗರದ ಟ್ರಾಫಿಕ್ ಪೊಲೀಸ್ ಠಾಣಾ ಪೇದೆ ನಾಗಮ್ಮ, ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿ ಶ್ರೀಧರ್ ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ ಆರೋಪಿ ಹೊಟ್ಟೆ ಮಂಜನನ್ನು ಬಂಧಿಸಿದ್ದಾರೆ.

ಆರೋಪಿ ಅಂಚೆ ಕಚೇರಿ ಮತ್ತು ಅನೇಕ ಬ್ಯಾಂಕ್ ಹತ್ತಿರ ಬರುವ ವೃದ್ಧರು ಮತ್ತು ಮಾಡು ಮಹಿಳೆಯರಿಗೆ ವೃದ್ಧಾಪ್ಯ ವೇತನ ಮತ್ತು ಪಿಂಚಣಿ ಕೊಡಿಸುವುದಾಗಿ ನಂಬಿಸಿ ಅವರ ಇತರೆ ಆಧಾರ್ ಕಾರ್ಡ್ ದಾಖಲೆ ಪಡೆದು, ಜೆರಾಕ್ಸ್ ಮಾಡಿಕೊಂಡು ಬರಲು ತನ್ನ ದ್ವಿಚಕ್ರ ವಾಹನದಲ್ಲಿ ಅಜ್ಞಾತ ಸ್ಥಳಕ್ಕೆ ಕಳೆದುಕೊಂಡು ಹೋಗುತ್ತಿದ್ದ. ಅವರನ್ನು ಹೆದರಿಸಿ, ಅವರಿಂದ ಬಲವಂತವಾಗಿ ಅಭರಣ ಕಿತ್ತುಕೊಂಡು ಅಲ್ಲಿಂದ ಪರಾರಿಯಾಗುತ್ತಿದ್ದ, ಜಿಲ್ಲೆಯ ವಿವಿಧ ಠಾಣೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಮೈಸೂರು ನಗರ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಸುಮಾರು 32 ಪ್ರಕರಣಗಳಲ್ಲಿ ಈತನ ಮೇಲೆ ದೂರು ದಾಖಲಾಗಿವೆ.

ಕೊರಟಗೆರೆ ಠಾಣೆ ಇನ್ಸ್ ಪೆಕ್ಟರ್ ಅನಿಲ್, ಸಬ್ ಇನ್ಸ್ ಪೆಕ್ಟರ್ ಜಿ.ಚೇತನ್ ಕುಮಾರ್, ಎಎಸ್ ಐ ಗಂಗಾಧರಪ್ಪ, ದೊಡ್ಡಲಿಂಗಯ್ಯ, ಮೋಹನ್, ಗಣೇಶ್, ರಾಮಚಂದ್ರ, ಸಿದ್ದರಾಮ, ಪ್ರದೀಪ್ ಕಾರ್ಯಾಚರಣೆ ನಡೆಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಅಶೋಕ್ ಶ್ಲಾಘಿಸಿದರು.

Leave a Reply

Your email address will not be published. Required fields are marked *