*ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ನಾಗರ ಪಂಚಮಿ ಎಂದು ಆಚರಿಸುತ್ತೇವೆ* .

ಇನ್ನು ನಾಗರ ಪಂಚಮಿಯ ಪೌರಾಣಿಕ ಹಿನ್ನೆಲೆ ಗಮನಿಸೋದಾದ್ರೆ, ಜನಮೇಜಯ ರಾಜನ ತಂದೆ ಪರೀಕ್ಷಿತ. ಆತನಿಗೆ ತಕ್ಷಕ ಎಂಬ ಸರ್ಪಗಳ ರಾಜ ಕಡಿದು, ಕೊಂದು ಬಿಡುತ್ತಾನೆ. ತನ್ನ ತಂದೆಯನ್ನು ಕೊಂದ ಒಂದು ಸರ್ಪದ ಮೇಲಿನ ಸಿಟ್ಟಿಗಾಗಿ ಇಡೀ ಸರ್ಪ ಕುಲವನ್ನೇ ನಾಶ ಮಾಡುವುದಕ್ಕೆ ಜನಮೇಜಯ ರಾಜ ಯಾಗವೊಂದನ್ನು ಮಾಡ್ತಾನೆ, ಆ ಯಾಗದ ಅಗ್ನಿಯೊಳಗೆ ಸರ್ಪಗಳು ಬೀಳಲು ಆರಂಭವಾಗುತ್ತವೆ. ಆದರೆ ತಕ್ಷಕ ಮಾತ್ರ ಈ ಯಾಗಕ್ಕೆ ಬಂದು ಬೀಳುವುದಿಲ್ಲ. ಆತ ಎಲ್ಲಿದ್ದಾನೆ ಎಂದು ದಿವ್ಯ ದೃಷ್ಟಿಯ ಮೂಲಕ ನೋಡಿದಾಗ ಇಂದ್ರಲೋಕದಲ್ಲಿ ಇರುವುದು ಗೊತ್ತಾಗುತ್ತದೆ. ಅಲ್ಲಿದ್ದರೂ ಬಿಡುವುದಿಲ್ಲ ಎಂದು ನಿರ್ಧರಿಸಿ ಮಂತ್ರ ಹೇಳಲು ಆರಂಭಿಸುತ್ತಾರೆ.

ತಕ್ಷಕ ಹೋಗಿ ಇಂದ್ರನ ಸಿಂಹಾಸನಕ್ಕೆ ಸುತ್ತಿ ಹಾಕಿಕೊಂಡು ಬಿಡುತ್ತಾನೆ. ಇತ್ತ ಜನಮೇಜಯ ಕೈಗೊಂಡಿರುವ ಯಾಗದಲ್ಲಿ ಇಂದ್ರನ ಸಹಿತವಾಗಿ ಯಾಗ ಅಗ್ನಿಗೆ ಬಂದು ಬೀಳುವಂತೆ ಮಂತ್ರ ಆರಂಭಿಸಲಾಗುತ್ತದೆ. ಆಗ ಹೆದರಿದ ಇಂದ್ರನು ಮಾನಸಾದೇವಿ ಬಳಿ ಹೋಗುತ್ತಾನೆ. ಆಗ ಆಕೆ, ಇಂದ್ರನನ್ನು ತೊಂದರೆಯಿಂದ ಕಾಪಾಡು ಎಂದು ತನ್ನ ಮಗ ಆಸ್ತಿಕನನ್ನು ಕಳಿಸುತ್ತಾಳೆ. ಆಸ್ತಿಕನು ಜನಮೇಜಯನ ಯಾಗ ಸ್ಥಳಕ್ಕೆ ಬರುತ್ತಾನೆ. ಆ ಸಂದರ್ಭದಲ್ಲಿ ಏನು ಕೋರಿದರೂ ನೀಡುವುದಾಗಿ ಜನಮೇಜಯ ಮಾತು ಕೊಡುತ್ತಾನೆ. ಆಗ ಆತ, ಈ ಯಾಗವನ್ನು ನಿಲ್ಲಿಸು ಎಂದು ಕೇಳುತ್ತಾನೆ. ಅವನ ಮಾತಿನಂತೆ ಜನಮೇಜಯ ಅಲ್ಲಿಗೆ ಯಾಗವನ್ನು ನಿಲ್ಲಿಸುತ್ತಾನೆ, ನಾಗ ಸಂಕುಲ ಉಳಿಯುತ್ತದೆ. ಆ ದಿನದ ಸ್ಮರಣೆಗಾಗಿ ನಾಗರ ಪಂಚಮಿ ಆಚರಿಸಲಾಗುತ್ತದೆ. ಆದ್ದರಿಂದ ಅಲ್ಲಿಂದ ಈಚೆಗೆ ಉಳಿದ ತಕ್ಷಕ- ಆಸ್ತಿಕನ ಸಹಿತ ನಾಗಸಂಕುಲಕ್ಕೆ ಆಶ್ಲೇಷ ಬಲಿ ಮಾಡಿಕೊಂಡು ಬರಲಾಗುತ್ತಿದೆ.

ನಾಗರ ಪಂಚಮಿ. ಅಂದರೆ, ನಾಗನ ಆರಾಧನೆಗೆ ಪರ್ವ ಕಾಲ. ಹಿಂದೂ ಧರ್ಮದ ನಂಬಿಕೆ ಪ್ರಕಾರ ಎಲ್ಲ ಜೀವ ಜಂತುಗಳನ್ನು ಪೂಜ್ಯ ಭಾವದಿಂದ ಕಾಣುತ್ತೇವೆ. ಇನ್ನು ನಾಗನ ವಿಚಾರಕ್ಕೆ ಬಂದರೆ ಅಗ್ನಿ ಪುರಾಣ, ಸ್ಕಂದ ಪುರಾಣ ಹೀಗೆ ಹದಿನೆಂಟು ಪುರಾಣಗಳಲ್ಲಿ ನಾಗನಿಗೆ ಪ್ರತ್ಯೇಕ ಲೋಕವಿದೆ ಎಂಬ ಉಲ್ಲೇಖವಿದೆ.

ನಾಗರಪಂಚಮಿಯ ಹಬ್ಬದಂದು ತಿನಿ ಎರೆಯುವುದು;

ಇನ್ನು ನಾಗರ ಪಂಚಮಿಯಂದು ತನಿ ಎರೆಯುವ ಸಂಪ್ರದಾಯ ಇದೆ. ಆ ದಿನದಂದು ಹುತ್ತಕ್ಕೆ ಹಾಲು ಹಾಕುವುದು, ಜೇನುತುಪ್ಪ, ನೀರು, ಗೆಜ್ಜೆವಸ್ತ್ರ, ಅರಿಶಿನ- ಕುಂಕುಮ ಹೀಗೆ ಎಲ್ಲವನ್ನೂ ರಾಶಿರಾಶಿ ಜನ ಹೋಗಿ ಹಾಕಿಬಿಡ್ತೀವಿ. ಅದನ್ನು ನಾವು ಭಕ್ತಿ ಅಂದುಕೊಳ್ತೀವಿ. ಆದರೆ ಹೀಗೆ ಮಾಡುವುದರಿಂದ ನಾಗನ ವಾಸಸ್ಥಾನಕ್ಕೆ ಅಪಚಾರ ಮಾಡಿದಂತಾಗುತ್ತದೆ. ಹಾಲು, ಜೇನುತುಪ್ಪ ಮತ್ತೊಂದಕ್ಕಾಗಿ ಹುಳ-ಹುಪ್ಪಟೆಗಳು ಮುತ್ತಿಕೊಳ್ಳುತ್ತವೆ. ಆದ್ದರಿಂದ ಹೀಗೆ ಹುತ್ತಕ್ಕೆ ತನಿ ಎರೆಯುವ ಬದಲಿಗೆ ನಾಗರ ಕಲ್ಲಿಗೆ ಪೂಜೆ ಮಾಡಿ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಹೀಗೆ ಪಂಚಾಮೃತ ಅಭಿಷೇಕ ಮಾಡಿದರೂ ಅಡ್ಡಿ ಇಲ್ಲ. ಈ ಪಂಚಾಮೃತ ಅಭಿಷೇಕಕ್ಕೂ ಮುನ್ನ ಹಾಗೂ ನಂತರ ನೀರಿನಿಂದ ಚೆನ್ನಾಗಿ ತೊಳೆದು ಸ್ವಚ್ಛ ಮಾಡಿ. ಎಲ್ಲಿ ಸ್ವಚ್ಛತೆ ಇರುತ್ತದೋ ಅಲ್ಲಿ ಭಗವಂತ ಇರುತ್ತಾನೆ.

ಕೆಂಪು ಹೂವಿನ ಆರಾಧನೆ ಬಹಳ ಶ್ರೇಷ್ಠ:

ಕೆಲವು ಕಡೆ ನಾಗರ ಪಂಚಮಿಯಂದು ಹುತ್ತದ ಮಣ್ಣು ಅಥವಾ ಕೆಂಪು ಮಣ್ಣು ತಂದು, ನಾಗನ ಬಿಂಬ ಮಾಡಿ, ತುಳಸಿ ಕಟ್ಟೆ ಮುಂದೆ ಇಡುತ್ತಾರೆ. ಅಲ್ಲಿ ಪೂಜೆ ಮಾಡಿ, ನೈವೇದ್ಯ ಮಾಡುತ್ತಾರೆ. ಆರು ಬಗೆಯ ಹೂವಿನಲ್ಲಿ ಅರ್ಚನೆ ಮಾಡುತ್ತಾರೆ. ತಂಬಿಟ್ಟು ನೈವೇದ್ಯ ನೀಡುತ್ತಾರೆ. ನೈವೇದ್ಯ ಮಾಡುವಾಗ ಸಿಹಿ ಪದಾರ್ಥಗಳು ಹೆಚ್ಚಿನ ಪ್ರಮಾಣದಲ್ಲಿ ಇರಲಿ. ಉಳಿದ ಪದಾರ್ಥಗಳಿಗೆ ಉಪ್ಪು ಬಳಸಬಾರದು. ನಾವು ಕೂಡ ಉಪ್ಪಿಲ್ಲದ ಆಹಾರವನ್ನು ಸೇವಿಸಬೇಕು. ಆ ದಿನದಂದು ಉಪ್ಪಿಲ್ಲದ ಆಹಾರ ಬಳಸಲು ಪದ್ಧತಿ ಇದೆ. ಏಕೆಂದರೆ ಉಪ್ಪಂದರೆ ಋಣ. ನಾಗಗಳ ಆರಾಧ್ಯ ದೈವ ಸುಬ್ರಹ್ಮಣ್ಯ. ಆದ್ದರಿಂದ ಸುಬ್ರಹ್ಮಣ್ಯ ಆರಾಧನೆಯಂದು ಉಪ್ಪಿಲ್ಲದ ಆಹಾರ ಸೇವನೆಯನ್ನೇ ಮಾಡಬೇಕು.

ಬ್ರಹ್ಮಚಾರಿ ಭೋಜನ, ವಸ್ತ್ರ ದಾನ:

ನಾಗರಪಂಚಮಿಯಂದು ಬ್ರಹ್ಮಚಾರಿ ಭೋಜನಕ್ಕೆ ವಿಶೇಷ ಪ್ರಾಶಸ್ತ್ಯ ಇದೆ. ಆ ದಿನದಂದು ಬ್ರಹ್ಮಚಾರಿಗಳಿಗೆ (ಸಣ್ಣ ವಯಸ್ಸಿನ-ಅವಿವಾಹಿತ ಶ್ರೀವೈಷ್ಣವ ಬಾಲಕರಿಗೆ) ಭೋಜನ ಉಣಬಡಿಸಬೇಕು. ಆ ನಂತರ ಜನಿವಾರ, ಗೋಪಿಚಂದನ, ವಸ್ತ್ರ, ದಕ್ಷಿಣೆಗಳನ್ನು ದಾನ ನೀಡಬೇಕು. ಜಾತಕದಲ್ಲಿ ಕಾಳಸರ್ಪ, ಘಟ ಕಾಳಸರ್ಪ ದೋಷ ಇರುವಂಥವರು, ಈ ಹಿಂದೆ ಹಾವನ್ನು ಹೊಡೆದಿದ್ದರೆ ಅಂಥವರು ನಾಗನ ಆರಾಧನೆ ಮಾಡಬೇಕು. ಸರ್ಪ ಶಾಪಾತ್ ಕುಲಕ್ಷಯಃ ಎಂಬ ಮಾತಿದೆ. ನಾಗನ ಶಾಪ ಇದ್ದರೆ ಮಕ್ಕಳು ಆಗುವುದಿಲ್ಲ. ಅಥವಾ ವಂಶದ ಅಭಿವೃದ್ಧಿಗೆ ಗಂಡು ಸಂತಾನ ಆಗುವುದಿಲ್ಲ ಎಂಬ ಮಾತಿದೆ. ನಾಗ ದೋಷ ನಿವಾರಣೆ,

ಸಂತಾನ ಪ್ರಾಪ್ತಿಗಾಗಿ ಬೆಳಗ್ಗಿನಿಂದ ಉಪವಾಸ ಇದ್ದು, ಮಧ್ಯಾಹ್ನ ಉಪ್ಪಿಲ್ಲದ ಊಟ ಮಾಡಬೇಕು. ನಾಗರ ಕಲ್ಲಿಗೆ ಪ್ರದಕ್ಷಿಣೆ ಮಾಡಬೇಕು:

ನಾಗನ ಆರಾಧನೆಗೆ ಇಡೀ ಶ್ರಾವಣ ಮಾಸ ಶ್ರೇಷ್ಠ

ಈ ಶ್ರಾವಣ ಮಾಸವೇ ನಾಗನ ಆರಾಧನೆಗೆ ವಿಶೇಷ;

ನಾಗದೋಷದಿಂದ ವಿವಾಹ ವಿಳಂಬ, ಸಂತಾನ ಇಲ್ಲದಿರುವುದು, ಅತಿಯಾದ ಸಿಟ್ಟು, ವಿದ್ಯಾ ಭಂಗ, ನಿರುದ್ಯೋಗ ಹೀಗೆ ನಾನಾ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ ಆಶ್ಲೇಷಾ ಬಲಿ, ಸರ್ಪಶಾಂತಿ (ಕರಿ ಎಳ್ಳು, ಜೇನುತುಪ್ಪ, ಸಕ್ಕರೆ ಅಥವಾ ಬೆಲ್ಲ, ಪಾಯಸ, ತುಪ್ಪ ಶ್ರೇಷ್ಠ) ಮಾಡಿಸಿಕೊಂಡರೆ ದೋಷ ನಿವಾರಣೆಗೆ ಅನುಕೂಲ ಆಗುತ್ತದೆ. ಜ್ಯೋತಿಷಿಗಳಲ್ಲಿ ಈಗಾಗಲೇ ಜಾತಕ ತೋರಿಸಿ, ಸರ್ಪಕ್ಕೆ ಸಂಬಂಧಿಸಿದ ದೋಷಗಳ ನಿವಾರಣೆಗೆ ಅವರೇನಾದರೂ ಸಲಹೆ ನೀಡಿದ್ದಾರೆ ಅಂತಾದರೆ ಅದರ ನಿವಾರಣೆಗೆ ಈ ಮಾಸವೇ ತುಂಬ ಶ್ರೇಷ್ಠವಾದದ್ದು ಆದ್ದರಿಂದ *ನಾಗನ ಆರಾಧನೆ ಮಾಡಿ, ಎಲ್ಲರಿಗೂ ಒಳಿತಾಗಲಿ*

Leave a Reply

Your email address will not be published. Required fields are marked *