ಸಲಗ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದ ದುನಿಯಾ ವಿಜಯ್, ಇದೀಗ ಭೀಮ ಸಿನಿಮಾ ಮೂಲಕ ಮತ್ತೆ ಅಬ್ಬರ ಶುರುಮಾಡಿದ್ದಾರೆ. ಟ್ರೈಲರ್, ಸಾಂಗ್ ಗಳ ಮೂಲಕ ಹವಾ ಸೃಷ್ಟಿಸಿದ್ದ ಭೀಮ..ಇಂದು ರಾಜ್ಯಾದ್ಯಂತ 400ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲದೇ ವಿದೇಶದಲ್ಲೂ ಗ್ರ್ಯಾಂಡ್ ರಿಲೀಸ್ ಆಗಿದ್ದು, ತೆರೆಮೇಲೆ ಭೀಮನ ಅಬ್ಬರವನ್ನ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಸಿಲಿಕಾನ್ ಸಿಟಿಯ ಸಂತೋಷ್ ಥಿಯೇಟರ್ ನಲ್ಲಿ ಭೀಮನಿಗೆ ಅದ್ಧೂರಿ ಸ್ವಾಗತ ಕೋರಿದ ಫ್ಯಾನ್ಸ್, ಶಿಳ್ಳೆ,ಕೇಕೆಯ ಮೂಲಕ ಭೀಮನಿಗೆ ಅಭಿಮಾನದ ಅಭಿಷೇಕ ಮಾಡಿದ್ದಾರೆ.
ಮಾದಕವ್ಯಸನ, ರೌಡಿಸಂ, ಪ್ರೀತಿಪ್ರೇಮದ ಮಿಕ್ಸ್ ಮಸಾಲದಂತಿರೋ ಭೀಮ ಚಿತ್ರಕ್ಕೆ ಪ್ರೇಕ್ಷಕ ವರ್ಗ ಫುಲ್ ಮಾರ್ಕ್ಸ್ ಕೊಟ್ಟಿದ್ದು, ಅತ್ತ ಖಡಕ್ ಡೈಲಾಗ್ ಗಳು, ವಿಭಿನ್ನ ಪ್ರಯತ್ನದ ಹಾಡುಗಳ ಮೂಲಕ ಬೆಳ್ಳಿತೆರೆಗೆ ಎಂಟ್ರಿಯಾದ ಭೀಮನಿಗೆ ಅಭಿಮಾನಿಗಳು ಪ್ರೀತಿ ಕೊಟ್ಟು ಅರಸಿದ್ದಾರೆ. ಬಿಗ್ ಸ್ಕ್ರೀನ್ ನಲ್ಲಿ ಭೀಮನ ಅಬ್ಬರ ಕಂಡ ಫ್ಯಾನ್ಸ್, ಭೀಮ ಸಿನಿಮಾದ ಕಥೆ, ಆಕ್ಷನ್ ಹಾಗೂ ಕ್ರೈಂಲೋಕದೊಳಗಿನ ಪ್ರೇಮಕತೆಗೆ ಫಿದಾ ಆಗಿದ್ದಾರೆ. ಸಲಗ ಚಿತ್ರದ ಮೂಲಕ ಡೈರೆಕ್ಟರ್ ಹ್ಯಾಟ್ ಧರಿಸಿದ ದುನಿಯಾ ವಿಜಯ್ , ಇದೀಗ ಭೀಮದಲ್ಲೂ ಆಕ್ಷನ್ ಕಟ್ ಹೇಳೋ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಪ್ಯಾನ್ ಇಂಡಿಯಾ ಕ್ರೇಜ್ ನಲ್ಲಿದ್ದ ಸಿನಿದುನಿಯಾಗೆ ಪ್ಯಾನ್ ಕರ್ನಾಟಕ ಅನ್ನೋ ಕಲ್ಪನೆ ಕೊಟ್ಟಿರೋ ಭೀಮಾ ತಂಡ ಪ್ರೇಕ್ಷಕರ ಜೈಕಾರ,ಚಪ್ಪಾಳೆ ಗಿಟ್ಟಿಸಿಕೊಂಡಿದೆ
ಭೀಮ ಡ್ರಗ್ ಮುಕ್ತ ಸಮಾಜಕ್ಕೆ ಕರೆ ನೀಡುವ, ಪ್ರತಿಯೊಬ್ಬರಿಗೂ ಜವಾಬ್ದಾರಿಯ ಅರಿವು ಮೂಡಿಸುವಂತಹ ಸಂದೇಶ ನೀಡುವ ಚಿತ್ರದಂತಿದ್ದು. ಈಗಿನ ಕಾಲದಲ್ಲಿ ಡ್ರಗ್ ಎನ್ನುವುದು ಇಡೀ ಸಮಾಜವನ್ನು ವ್ಯಾಪಿಸಿರುವ ರೀತಿ ಭಯ ಹುಟ್ಟಿಸುತ್ತದೆ ಅದನ್ನು ನೇರವಾಗಿ ತೆರೆ ಮೇಲೆ ತರೋ ಕೆಲಸವನ್ನ ಭೀಮಾ ಚಿತ್ರದ ಮೂಲಕ ದುನಿಯಾ ವಿಜಯ್ ಮಾಡಿದ್ದಾರೆ. ಚಿತ್ರದ ಪ್ರತಿ ಭಾಗದಲ್ಲೂ ನೈಜ್ಯತೆ, ರೌಡಿಸಂ, ಮಾದಕ ವ್ಯಸನದ ಕರಾಳತೆಯನ್ನ ಅನಾವರಣ ಮಾಡಿರೋ ಭೀಮ..ಅದರ ಜೊತೆ ಜೊತೆಗೆ ಜಾಗೃತಿ ಮೂಡಿಸುವ ಕೆಲಸಕ್ಕೂ ಕೈ ಹಾಕಿದೆ
ಇನ್ನು ಇಂದು ರಿಲೀಸ್ ಆಗಿರೋ ಜೀನಿಯಸ್ ಮುತ್ತ,ಕಬಂಧ,ಇದು ಎಂತಾ ಲೋಕವಯ್ಯ ಸಿನಿಮಾಗಳಿಗೆ ಭೀಮ ಚಿತ್ರ ಹೊಡೆತ ಕೊಟ್ಟಿದೆ. ಚಂದನವನದಲ್ಲಿ ಸ್ಟಾರ್ ನಟರ ಸಿನಿಮಾಗಳು ಸೈಲೆಂಟ್ ಆಗಿದ್ದ ಹೊತ್ತಲ್ಲೇ ಭೀಮ ಎಂಟ್ರಿಯಾಗಿದ್ದು, ಉಳಿದ ಸಿನಿಮಾಗಳನ್ನ ಓವರ್ ಟೇಕ್ ಮಾಡಿ ಮುನ್ನುಗ್ಗಿದ್ದಾನೆ. ಕುಂಜಾರ ಫಿಲಂ ಲಾಂಛನದಲ್ಲಿ ರಿಲೀಸ್ ಆಗಿರೋ ಕಬಂಧ, ಕರ್ನಾಟಕ-ಕೇರಳ ಗಡಿಯ ಹಳ್ಳಿಗಳಲ್ಲಿನ ಕತೆಯನ್ನ ಹೊತ್ತು ಬಂದಿರೋ ಇದು ಎಂತಾ ಲೋಕವಯ್ಯ ಸಿನಿಮಾ, ನಿರ್ದೇಶಕ ಟಿ.ಎಸ್.ನಾಗಾಭರಣ ಅವರ ಪತ್ನಿ ನಾಗಿಣಿ ಭರಣ್ ನಿರ್ದೇಶನದ ಜೀನಿಯಸ್ ಮುತ್ತ ಸಿನಿಮಾಗಳು ಇಂದೇ ತೆರೆಗಪ್ಪಳಿಸಿದ್ದು, ಭೀಮನ ಅಬ್ಬರದ ಮಧ್ಯೆ ಎಲ್ಲಾ ಚಿತ್ರಗಳು ಮಂಕಾಗಿದೆ
ಸಲಗ ಬಳಿಕ ಕೊಂಚ ಬ್ರೇಕ್ ಕೂಡ ಕೊಡದೇ ಕೆಲಸ ಆರಂಭಿಸಿದ್ದ ದುನಿಯಾ ವಿಜಯ್, ಇದೀಗ ತಮ್ಮದೇ ನಿರ್ದೇಶನದ ಮೂಲಕ ಮತ್ತೆ ಹವಾ ಎಬ್ಬಿಸಿದ್ದಾರೆ. ಭೀಮನ ಅಬ್ಬರಕ್ಕೆ ಪ್ರೇಕ್ಷಕರು ಕೂಡ ಜೈ ಎಂದಿದ್ದು, ಭೀಮ ಸಿನಿಮಾ ಮೂಲಕ ದುನಿಯಾ ವಿಜಯ್ ಮತ್ತೊಂದು ದಾಖಲೆಯ ನಿರೀಕ್ಷೆ ಇಟ್ಟುಕೊಂಡು ಕಾದು ಕುಳಿತಿದ್ದಾರೆ. ಇಂದಿನ ಸಮಾಜದ ಘಟನೆಗಳ ಜೊತೆ ಜೊತೆಗೆ ಯುವಜನರ ಬದುಕನ್ನ ಕೇಂದ್ರಿಕರೀಸಿ ಎಣೆದಿರೋ ಭೀಮ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ಕಿದ್ದು, ಅತ್ತ ಮುಚ್ಚಿಹೋಗುವ ಹಂತದಲ್ಲಿದ್ದ 18 ಥಿಯೇಟರ್ ಗಳಲ್ಲಿ ಸಿನಿಮಾ ರಿಲೀಸ್ ಮಾಡೋ ಮೂಲಕ ಥಿಯೇಟರ್ ಮಾಲೀಕರ ಮೊಗದಲ್ಲೂ ಭೀಮ ನಗು ತರಿಸಲು ಹೊರಟಿದ್ದಾನೆ.
ಒಟ್ಟಿನಲ್ಲಿ ವೀಕೆಂಡ್ ಸಮೀಪದಲ್ಲೇ ಭರ್ಜರಿ ಕತೆ ಹೊತ್ತ ಸಿನಿಮಾವೊಂದು ತೆರೆ ಕಂಡಿದ್ದು, ರೌಡಿಸಂ, ಡ್ರಗ್, ಮೋಜು ಮಸ್ತಿಯಲ್ಲಿ ಮುಳುಗಿರೋ ಯುವಜನರನ್ನ ಬಡಿದೆಬ್ಬಿಸಿ ಅರಿವು ಮೂಡಿಸೋ ಕೆಲಸಕ್ಕೆ ಭೀಮ ಮೂಲಕ ನಿರ್ದೇಶಕ ದುನಿಯಾ ವಿಜಯ್ ಮುಂದಾಗಿದ್ದಾರೆ. ಸದ್ಯ ಬಿಗ್ ಸ್ಕ್ರೀನ್ ಗೆ ಎಂಟ್ರಿಯಾಗಿದ್ದು, ದಾಖಲೆ ಮಟ್ಟಕ್ಕೆ ಯಶಸ್ಸು ಪಡೆಯುತ್ತಾ ಅನ್ನೋದನ್ನ ಕಾದುನೋಡಬೇಕಿದೆ