ಬೆಂಗಳೂರು: ಮೊದಲ ಗ್ಯಾರಂಟಿಯಾಗಿರುವ ಗೃಹಜ್ಯೋತಿ (Gruha Jyothi Scheme) ಜಾರಿಗೆ ಸಂಪುಟ ಸಭೆ ನಿರ್ಧರಿಸಿದ್ದು, ಜುಲೈ 1 ರಿಂದ ಬಳಕೆ ಮಾಡುವ ವಿದ್ಯುತ್ ಉಚಿತವಾಗಿರಲಿದೆ. ವಿದ್ಯುತ್ ಬಳಕೆ ಮಾಡಿದರೆ ಬಿಲ್ ಕಟ್ಟುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗದಿತ ಪ್ರಮಾಣದಷ್ಟು ವಿದ್ಯುತ್ ಬಳಸಿದರೆ ಬಿಲ್ಲ ಕಟ್ಟುವಂತಿಲ್ಲ. 12 ತಿಂಗಳ ಆವರೇಜ್ ವಿದ್ಯುತ್ ಬಳಕೆ ಮೇಲೆ ಶೇ 10 ರಷ್ಟು ಸೇರಿಸಿ ಹೆಚ್ಚುವರಿ ವಿದ್ಯುತ್ ನೀಡುತ್ತೇವೆ. ಆದರೆ ಹಿಂದಿನ ತಿಂಗಳಲ್ಲಿ ಬಾಕಿ ಇರಿಸಿರುವ ವಿದ್ಯುತ್ ಬಿಲ್ ಅನ್ನು ಗ್ರಾಹಕರು ಕಟ್ಟಬೇಕು ಎಂದರು.
ಜನರಿಗೆ ಕೊಟ್ಟಿ ಮೊದಲ ವಾಗ್ದಾನದಲ್ಲಿ ಗೃಹಜ್ಯೋತಿ ಮೊದಲನೆಯದ್ದು. ಪ್ರತಿ ಮನೆಗೆ 200 ಯುನಿಟ್ ಉಚಿತವಾಗಿ ನೀಡುವುದಾಗಿ ಭರವಸೆ ನೀಡಿದ್ದೇವು. ಈ ಗ್ಯಾರಂಟಿಯನ್ನು ಜಾರಿ ಮಾಡಬೇಕು ಎಂದು ತೀರ್ಮಾನಿಸಿದ್ದೇವೆ. ಸುದೀರ್ಘವಾಗಿ ಐದು ಗ್ಯಾರಂಟಿಗಳ ಬಗ್ಗೆ ಚರ್ಚೆ ನಡೆಸಿ ಐದೂ ಗ್ಯಾರಂಟಿಗಳನ್ನು ಈ ಆರ್ಥಿಕ ವರ್ಷದಲ್ಲಿ ಜಾರಿ ಮಾಡಲು ತೀರ್ಮಾನ ಮಾಡಿದ್ದೇವೆ. ಎಲ್ಲಾ ಜಾತಿ, ಧರ್ಮ, ಭಾಷಿಕರಿಗೆ ಗ್ಯಾರಂಟಿಗಳನ್ನು ತಲುಪಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.