ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದಲಿತ ಕುಂದು ಕೊರತೆಗಳ ಸಭೆಯನ್ನು ಏರ್ಪಡಿಸಿಲಾಗಿದ್ದು, ಈ ಸಭೆಗೆ ತಹಸೀಲ್ದಾರ್‍, ತಾ.ಪಂ ಸಿ.ಇ.ಒ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಗೈರಾಗಿದ್ದಾರೆ, ಈ ಸಂಬಂಧ ತಾಲೂಕು ದಲಿತ ಮುಖಂಡರು ಆಕ್ರೋಷವನ್ನ ಹೊರಹಾಕಿರುವ ಘಟನೆ ನಡೆದಿದೆ.

ಈ ಸಂಬಂಧ ಸಂಸದ ಮುಖಂಡ ಜಿ.ವಿ.ಗಂಗಪ್ಪನವರು ಮಾತನಾಡಿ, ತಾಲೂಕಿನಲ್ಲಿರುವ ದಲಿತರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪೊಲೀಸ್ ಠಾಣೆಯಲ್ಲಿ ದಲಿತರ ಕುಂದು ಕೊರತೆಗಳನ್ನು‌ ಆಲಿಸುವ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಈ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳೇ ಬರದಿರುವುದು ಅಚ್ಚರಿಯ ಸಂಗತಿ. ಈ ಹಿಂದೆ ಇದೇ ವಿಚಾರವಾಗಿ ತಾಲೂಕು ಆಡಳಿತಕ್ಕೆ ಮನವಿ ನೀಡಲಾಗಿತ್ತು. ದಲಿತರ ಕುಂದು ಕೊರತೆಗಳ ಸಭೆಗೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕೆಂದು ಮನವಿ ನೀಡಿದ್ದೇವೆ. ಆದರೆ ನಮ್ಮ ಮನವಿ ಕಸದ ಬುಟ್ಟಿಗೆ ಸೇರಿದೆ. ಸರ್ಕಾರಕ್ಕೆ ದಲಿತರನ್ನು ಉದ್ದಾರ ಮಾಡುವ ಉದ್ದೇಶವೇನೋ ಇದೆ, ಆದರೆ ಇಲ್ಲಿನ ಅಧಿಕಾರಿಗಳಿಗೆ ಇದರ ಬಗ್ಗೆ ಸ್ವಲ್ಪವೂ ಕಾಳಜಿಯೇ ಇಲ್ಲ. ತಾಲೂಕು ಮಟ್ಟದ ಅಧಿಕಾರಿಗಳು ಇಲ್ಲದೇ ಇದ್ದಾಗ ನಮ್ಮ ಸಮಸ್ಯೆಗಳು ಯಾವ ರೀತಿ ಬಗೆಹರಿಯುತ್ತದೆ. ಪೊಲೀಸ್ ಇಲಾಖೆಯವರು ತಮ್ಮ ವ್ಯಾಪ್ತಿಯಲ್ಲಿ ಸಭೆ ನಡೆಸುತ್ತಾರೆ. ಅವರು ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ಬಗೆಹರಿಸಬಹುದು. ಬೇರೆ ಇಲಾಖೆಗಳಲ್ಲಿನ ಸಮಸ್ಯೆಗಳನ್ನು ಹೇಗೆ ಬಗೆಹರಿಸಲು ಸಾಧ್ಯ. ಸಮಸ್ಯೆಗಳು ಬಗೆಹರಿಯದೇ ಇದ್ದಾಗ ಇಂತಹ ಸಭೆಗಳು ನಡೆದರೇ ಏನು, ನಡೆಯದಿದ್ದರೇ ಏನು ಎಂದು ಸಭೆಯಲ್ಲಿದ್ದವರು ಬೇಸರವನ್ನ ವ್ಯಕ್ತಪಡಿಸಿದರು.

ಅಲ್ಲದೇ ಮತ್ತೋರ್ವ ಮುಖಂಡರಾದ ಆದಿನಾರಾಯಣಪ್ಪ ಮಾತನಾಡಿ, ಈ ಹಿಂದೆ ಸಹ ಅನೇಕ ಭಾರಿ ದಲಿತರ ಕುಂದು ಕೊರತೆಗಳ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ತಿಳಿಸಲಾದ ಸಮಸ್ಯೆಗಳು ಎಷ್ಟು ತೀರ್ಮಾನವಾಗಿದೆ. ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೇ ಸಭೆಯಲ್ಲಿ ಇಲ್ಲ ಅಂದ ಮೇಲೆ ಸಭೆ ನಡೆಸುವ ಉದ್ದೇಶವಾದರೂ ಏನಿದೆ. ಪೊಲೀಸ್ ಇಲಾಖೆಯ ಅಧಿಕಾರಿಗಳು ತಮ್ಮ ಆದೇಶದಂತೆ ಸಭೆ ನಡೆಸುತ್ತಿದ್ದಾರೆ. ದಲಿತ ಸಂಘಟನೆಗಳ ವತಿಯಿಂದ ಈ ಹಿಂದೆ ನೀಡಿದಂತಹ ಮನವಿಯಂತೆ ಮುಂದಿನ ಸಭೆಯಲ್ಲಿ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಬೇಕಾಗಿ ವಿನಂತಿ. ಇಲ್ಲವಾದಲ್ಲಿ ನಾವು ಸಭೆಗಳಿಗೆ ಹಾಜರಾಗುವುದಿಲ್ಲ ಎಂದಿದ್ದಾರೆ.

ಈ ವೇಳೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್‍ ಗಣೇಶ್, ಪೊಲೀಸ್ ಸಿಬ್ಬಂದಿ, ದಲಿತಪರ ಸಂಘಟನೆಗಳ ಮುಖಂಡರಾದ ಚೆನ್ನರಾಯಪ್ಪ, ಇಸ್ಕೂಲಪ್ಪ, ರಮಣಪ್ಪ, ರಾಮಾಂಜಿನಪ್ಪ, ನಾರಾಯಣಸ್ವಾಮಿ ಸೇರಿದಂತೆ ಮತ್ತಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *