ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಕಾನೂನು ಬದ್ದವಾದ ಅನುಮತಿಯಾಗಿದೆ. ಹೀಗಾಗಿ ಸಿದ್ದರಾಮಯ್ಯ ನೈತಿಕತೆ ಹೊತ್ತು ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಹಾಗೂ ಸಂಸದ ಜಗದೀಶ್ ಶೆಟ್ಟರ್ ಆಗ್ರಹಿಸಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ವಿರುದ್ಧ ಬಿಜೆಪಿ ಹೋರಾಟ ಮಾಡುತ್ತಲೇ ಬರುತ್ತಿದೆ.
ರಾಜೀನಾಮೆ ಕೊಡಬೇಕು. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹ ಮಾಡಿದ್ದೇವೆ. ಇದೀಗ ರಾಜ್ಯಪಾಲರಿಗೆ ಖಾಸಗಿ ವ್ಯಕ್ತಿಗಳು ಸಹ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಇದಕ್ಕಾಗಿ ರಾಜ್ಯಪಾಲರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿದ್ದಾರೆ. ಅದರಂತೆ ರಾಜ್ಯಪಾಲರು ಕಾನೂನು ತಜ್ಞರ ಜೊತೆಗೆ ಸಮಾಲೋಚನೆ ನಡೆಸಿ ಅಂತಿಮವಾಗಿ ಅನುಮತಿ ಕೊಟ್ಟಿದ್ದಾರೆ. ಇದು ಕಾನೂನು ಬದ್ದವಾದ ನಿರ್ಧಾರವಾಗಿದೆ.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿ ಹೆಸರಿನಲ್ಲಿ 14 ಸೈಟ್ ಗಳನ್ನು ಪಡೆದುಕೊಂಡಿದ್ದಾರೆ. ಈ ಬಗ್ಗೆ ದಾಖಲೆಗಳಿವೆ. ಕಾನೂನು ಉಲ್ಲಂಘನೆಯಾಗಿರುವುದು ಸ್ಪಷ್ಟವಾಗಿದೆ. ರಾಜ್ಯದ ಸಿಎಂ ಜವಾಬ್ದಾರಿ ಹುದ್ದೆಯಲ್ಲಿದ್ದರು ಈ ರೀತಿಯಾಗಿ ನಡೆದುಕೊಂಡಿದ್ದು ಅವರಿಗೆ ಶೋಭೆಯಲ್ಲ. ಕಾನೂನು ಬಾಹಿರವಾಗಿ ನಡೆದುಕೊಂಡಿದ್ದರೆ ಕ್ರಮ ಕೈಗೊಳ್ಳಬೇಕು. ಆ ಹಿನ್ನೆಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ.
ಸಿದ್ದರಾಮಯ್ಯ ಅವರು ಪ್ರಾಸಿಕ್ಯೂಷನ್ ತನಿಖೆಯಾಗಿ ಆ ಬಳಿಕ ರಾಜೀನಾಮೆ ನೀಡತ್ತಾರೋ ಅಥವಾ ಇವಾಗಲೇ ನೀಡತ್ತಾರೋ ಅದು ಅವರ ವಿವೇಚನೆಗೆ ಬಿಟ್ಟ ವಿಚಾರ, ಆದರೆ ನಮ್ಮ ಆಗ್ರಹ ಈಗಾಗಲೇ ನೈತಿಕತೆ ಹೊತ್ತು ರಾಜೀನಾಮೆ ಕೊಡಬೇಕು ಎಂಬುವುದು. ಆ ಮೂಲಕ ಸ್ವಾತಂತ್ರ್ಯ ತನಿಖೆಗೆ ಅವಕಾಶ ಕಲ್ಪಿಸಬೇಕೆಂದರು. ಜತೆಗೆ ಇದೀಗ ರಾಜ್ಯಪಾಲರ ನಿರ್ಧಾರವನ್ನು ಚಾಲೆಂಜ್ ಮಾಡುವುದು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟ ವಿಚಾರ. ಆದರೆ ರಾಜ್ಯಪಾಲರ ನಿರ್ಧಾರ ಪ್ರಶ್ನೆ ಮಾಡುವುದು ಸರಿಯಲ್ಲ. ಇನ್ನೂ ಇದೆ ವೇಳೆ ರಾಜ್ಯಪಾಲರು ಕೇಂದ್ರ ಸರ್ಕಾರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಹಿಂದೆ ಭಾರದ್ವಾಜ್ ರಾಜ್ಯಪಾಲರಾಗಿದ್ದಾಗ ಯಡಿಯೂರಪ್ಪ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿತ್ತು.
ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಹೀಗಾಗಿ ರಾಜ್ಯಪಾಲರು ಅಗತ್ಯವಾದ ಕ್ರಮ ಕೈಗೊಳ್ಳತ್ತಾರೆ. ಇದನ್ನು ರಾಜಕೀಕರಣಗೊಳಿಸುವುದು ಸರಿಯಲ್ಲ. ಈ ಹಿಂದೆ ಶಶಕಲಾ ಜೊಲ್ಲೆ ಪ್ರಕರಣದಲ್ಲಿ ಕ್ರಮ ಕೈಗೊಳ್ಳದೇ ಬಿಜೆಪಿ ಸುಮ್ಮನಾಗಿತ್ತು ಎಂಬ ಪ್ರಶ್ನೆಗೆ ಆಗ ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಇದ್ದರು. ಆದರೆ ಈ ಬಗ್ಗೆ ಕಾಂಗ್ರೆಸ್’ನವರು ಹೋರಾಟ ಮಾಡಲಿಲ್ಲ. ಇದೀಗ ಸುಖಾಸುಮ್ಮನೆ ಹೋಲಿಕೆ ಮಾಡುವುದು ಸರಿಯಲ್ಲ.
ಇದೀಗ ನಾವು ಹೋರಾಟ ಮಾಡಿದ್ದೇವೆ. ಹಗರಣಗಳು ಬಯಲಿಗೆ ತಂದಿದ್ದೇವೆ ಎಂದರು. ಜತೆಗೆ ಆರ್ಕಾವತಿ ಹಗರಣದಲ್ಲಿಯೇ ಸಿದ್ದರಾಮಯ್ಯ ಸಿಎಂ ಹುದ್ದೆಗೆ ರಾಜೀನಾಮೆ ಕೊಡಬೇಕಿತ್ತು. ನ್ಯಾಯಮೂರ್ತಿ ಕೆಂಪಣ್ಣ ಆಯೋಗ ವರದಿ ನೀಡಿದೆ. ಆದರೆ ಈವರೆಗೂ ವರದಿ ಬಹಿರಂಗವಾಗಿಲ್ಲ. ಸಿದ್ದರಾಮಯ್ಯ ಸದನದಲ್ಲಿ ವರದಿ ಬಹಿರಂಗಗೊಳಿಸಿ ತಾವು ಸಾಚಾ ಎಂಬುದನ್ನು ತೋರಿಸಲಿ ಎಂದು ಸವಾಲ ಎಸೆದರು.