ಇವತ್ತಿನ ಕಾಲದಲ್ಲಿ ಒಂದೊತ್ತು ಊಟಕ್ಕೂ ಪರದಾಡುವಂತಹ ದುಸ್ಥಿತಿಯನ್ನ ಅನೇಕರು ಎದುರಿಸುತ್ತಿದ್ದಾರೆ. ಊಟವಿಲ್ಲದೇ ಅದೆಷ್ಟೋ ಜನ ಮೃತಪಟ್ಟಿರುವ ಘಟನೆಗಳ ಬಗ್ಗೆಯೂ ಕೇಳಿದ್ದೇವೆ. ಇದೀಗ ಅಂತಹುದೇ ಒಂದು ಘಟನೆ ನಡೆದಿದೆ. ತನ್ನ ಹೆತ್ತ ತಾಯಿ ಮೃತಪಟ್ಟಿದ್ದು, ಆಕೆಯ ಅಂತ್ಯಸಂಸ್ಕಾರ ನಡೆಸಲು ಕೈಯಲ್ಲಿ ಹಣವಿಲ್ಲದೇ, ಅಂತ್ಯ ಸಂಸ್ಕಾರ ಮಾಡಲು ಮೃತಪಟ್ಟ ಮಹಿಳೆಯ ಮಗಳು ಆಕೆ ಸರಿಸುಮಾರು 11 ವರ್ಷದ ಬಾಲಕಿ ಭಿಕ್ಷೆ ಬೇಡಿರುವ ಘಟನೆಯೊಂದು ನಡೆದಿದೆ. ಮನಕಲುಕುವ ಹೃದಯ ವಿದ್ರಾವಕ ಘಟನೆಗೆ ಸಂಬಂಧಿಸಿದ ವಿಡಿಯೋ ಒಂದು ಸೋಷಿಯಲ್ ವೈರಲ್ ಆಗಿದೆ.
ಮರಣ ಹೊಂದಿರುವ ಹೆತ್ತಮ್ಮನ ಅಂತ್ಯಸಂಸ್ಕಾರ ಮಾಡಲು ಹಣವಿಲ್ಲದೇ 11 ವರ್ಷದ ಬಾಲಕಿ ಭಿಕ್ಷಾಟನೆ ಮಾಡಿದ ಘಟನೆ ತೆಲಂಗಾಣದ ನಿರ್ಮಲ್ ಜಿಲ್ಲೆಯ ತಾನೂರ್ ಪಟ್ಟಣದ ತರೋಡ ಎಂಬ ಗ್ರಾಮದಲ್ಲಿ ನಡೆದಿದೆ. ಗಂಗಾಮಣಿ (36) ಮೃತ ದುರ್ದೈವಿಯಾಗಿದ್ದು, ದುರ್ಗಾ (11) ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಭಿಕ್ಷೆ ಬೇಡಿದ್ದಾಳೆ.
ಹಲವು ವರ್ಷಗಳ ಹಿಂದೆಯಷ್ಟೆ ಗಂಡನಿಂದ ದೂರವಾಗಿದ್ದ ಮೃತಳು ತನ್ನ ಮಗಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುತ್ತಾ, ಮುಸುರಿ ತಿಕ್ಕಿಕ್ಕೊಂಡು ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಬಾಲಕಿಯ ತಂದೆ ಮೃತಪಟ್ಟಿದ್ದರು. ಕಳೆದ ಶನಿವಾರವಷ್ಟೇ ರಾತ್ರಿ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡು ಪುಟಾಣಿ ಮಗುವನ್ನು ತಬ್ಬಲಿ ಮಾಡಿದ್ದಾಳೆ. ಇದೀಗ ತಾಯಿಯ ಅಂತ್ಯಸಂಸ್ಕಾರಕ್ಕೂ ಹಣವಿಲ್ಲದೇ ಸಣ್ಣ ವಯಸ್ಸಿನಲ್ಲಿ ಬಾಲಕಿ ಭಿಕ್ಷಾಟನೆಗೆ ಮುಂದಾಗಿರುವುದು ಎಲ್ಲರ ಹೃದಯ ಕರಗಿಸುವಂತಿದೆ .
ತಾಯಿಯನ್ನು ಕಳೆದುಕೊಂಡಿರುವ ಪುಟ್ಟ ಬಾಲಕಿಗೆ ಅತ್ತ ಸಂಬಂಧಿಕರೂ ಇಲ್ಲದೇ, ಹಣವೂ ಇಲ್ಲದೇ ಭಿಕ್ಷೆ ಬೇಡುವ ದುಸ್ಥಿತಿ ಬಂದೊದಗಿದೆ. ತನ್ನ ತಾಯಿಯ ಅಂತ್ಯ ಸಂಸ್ಕಾರಕ್ಕಾಗಿ ಮನೆ ಮುಂದೆ ಟವೆಲ್ ಹಾಕಿ ಭಿಕ್ಷೆ ಬೇಡಿದ್ದಾಳೆ. ಬಾಲಕಿ ದುರ್ಗಾ ಭಿಕ್ಷೆ ಬೇಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೋಡುಗರು ಕಂಬನಿ ಮಿಡಿದಿದ್ದಾರೆ. ಪೋನ್ ಪೇ ಮೂಲಕ ಹಣ ಸಂಗ್ರಹಿಸಿ ಹಾಗೂ ಸ್ಥಳೀಯರ ನೆರವಿನಿಂದ ಬಾಲಕಿ ತನ್ನ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಿದ್ದಾಳೆ.