ಹುಬ್ಬಳ್ಳಿ: ನವಲಗುಂದ ಮತಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಮಾಡಿಕೊಡುವ ನೆಪದಲ್ಲಿ ಪಾರದರ್ಶಕ ಕಾನೂನು ಉಲ್ಲಂಘನೆ ಮಾಡಿ, ಚಕ್ಕಡಿ ರಸ್ತೆಗಳ ನಿರ್ಮಿಸಿ ಕೋಟ್ಯಾಂತರ ರೂಪಾಯಿ ಕೊಳ್ಳೆ ಹೊಡೆಯಲಾಗುತ್ತಿದ್ದು, ಸರಕಾರ ತನಿಖೆಗೆ ಮುಂದಾಗಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಎಚ್ಚರಿಸಿದ್ದಾರೆ.
ಶನಿವಾರದಂದು ನವಲಗುಂದ ಪಾರಂಪರಿಕ ಗುಡ್ಡದಲ್ಲಿ ಅಕ್ರಮವಾಗಿ ಮಣ್ಣು ಕೊಳ್ಳೆ ಹೊಡೆಯುತ್ತಿರುವ ಕುರಿತು ಜನರು ಗಮನಕ್ಕೆ ತಂದಾಗ, ಸ್ಥಳ ಪರಿಶೀಲನೆ ನಡೆಸಿದಾಗ ಕಾನೂನು ಮೀರಿ ನಡೆಯುತ್ತಿರುವುದು ಕಂಡು ಬಂದಿದೆ. ಸರಕಾರವೂ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲ. ಅಧಿಕೃತ ಆದೇಶ ಪಡೆಯದೇ ಕಾಮಗಾರಿ ಮಾಡಲು ಸಾಧ್ಯವಿಲ್ಲ. ಕ್ಷೇತ್ರದಲ್ಲಿ ಸರಕಾರದ ಪಾರದರ್ಶಕ ಕಾನೂನಿನ ನಿಯಮಗಳನ್ನ ಗಾಳಿಗೆ ತೂರಲಾಗಿದೆ.
ನಗರಸಭೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಯಾವುದೇ ಪರವಾನಿಗೆ ಇಲ್ಲದೇ ಗುಡ್ಡದ ಮಣ್ಣನ್ನ ತೆಗೆದು ನಗರೋತ್ಥಾನ ಡಾಂಬರ ರಸ್ತೆಯ ಮೇಲೆ ಮಣ್ಣು ಹಾಕಿ, ಚಕ್ಕಡಿ ದಾರಿ ಎಂದು ಕೋಟಿ ಕೋಟಿ ಹಣವನ್ನ ಲೂಟಿ ಹೊಡೆಯಲಾಗುತ್ತಿದೆ ಎಂದು ಹೇಳಿದರು. ನಗರಸಭೆಯ ವಾಹನಗಳನ್ನೂ ದುರ್ಬಳಕೆ ಮಾಡಿಕೊಂಡಿರುವುದು ಕಂಡು ಬಂದಿದೆ.
ಚಕ್ಕಡಿ ದಾರಿಗಾಗಿ ಈಗಾಗಲೇ ಹೊಡೆದಿರುವ ಹಣ ಎಷ್ಟು ಎಂಬುದನ್ನು ಹೇಳಬೇಕು. ಯಾವ ಯಾವ ಸರಕಾರಿ ಭೂಮಿಯಲ್ಲಿ ಮಣ್ಣನ್ನ ತೆಗೆದು ತೆರಿಗೆ ವಂಚನೆ ಮಾಡಲಾಗಿದೆ ಎಂಬುದನ್ನ ಬಹಿರಂಗ ಮಾಡಬೇಕು ಎಂದು ಆಗ್ರಹಿಸಿದರು. ಚಕ್ಕಡಿ ದಾರಿ ಹಗರಣ ಬಹುದೊಡ್ಡದಾಗಿದೆ. ಈ ಬಗ್ಗೆ ಸರಕಾರ ತನಿಖೆಗೆ ಮುಂದಾಗಬೇಕೆಂದು ಒತ್ತಾಯಿಸಿದರು.
ನವಲಗುಂದ ಕ್ಷೇತ್ರದಲ್ಲಿ ಚಕ್ಕಡಿ ದಾರಿಯ ನೆಪದಲ್ಲಿ ಮಣ್ಣು ಲೂಟಿ ಮಾಡಿ, ಪಿಡಬ್ಲ್ಯೂಡಿ, ಜಿಲ್ಲಾ ಪಂಚಾಯತಿ, ಪಿಎಂಜಿಎಸ್‌ವೈ ಹಾಗೂ ನೀರಾವರಿ ಇಲಾಖೆಯ ಡಾಂಬರ್ ರಸ್ತೆಯಲ್ಲಿ ಮಣ್ಣು ಹಾಕಲು ಪರವಾನಿಗೆ ಕೊಟ್ಟಿದ್ದು ಯಾರೂ ಎಂದು ಪ್ರಶ್ನಿಸಿದ ಮಾಜಿ ಸಚಿವರು, ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳನ್ನ ತಕ್ಷಣವೇ ಅಮಾನತ್ತು ಮಾಡಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.