ಹುಬ್ಬಳ್ಳಿ: ಬಾಂಗ್ಲಾ ಪ್ರಧಾನಿ ಗತಿಯೇ ರಾಜ್ಯದಲ್ಲಿ ರಾಜ್ಯಪಾಲರಿಗೂ ಬರಲಿದೆ ಎಂಬ ವಿವಾದಾತ್ಮಕ ಹೇಳಿಕೆ ನೀಡುವ ಕಾಂಗ್ರೆಸ್ ವಿಪ ಸದಸ್ಯ ಐವನ್ ಡಿಸೋಜ ವಿರುದ್ಧ ರಾಜ್ಯ ಸರ್ಕಾರ ಕೂಡಲೇ ಎಫ್ಐಆರ್ ದಾಖಲಿಸಿ ಬಂಧಿಸಬೇಕೆಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಮ್ಮ ಮಾನಸಿಕ ಮನಸ್ಥಿತಿಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಜನರ ಸೇವೆ ಮಾಡುವ ಕೆಲಸ ಮಾಡಬೇಕೋ? ಅಥವಾ ಬಾಂಗ್ಲಾದೇಶದ ಉದಾಹರಣೆ ತಗೋಬೇಕೋ? ಇದೀಗ ಜಗತ್ತು ಭಾರತವನ್ನು ಮೆಚ್ಚುವ ಕೆಲಸ ಆಗುತ್ತಿದೆ. ಈ ಸಂದರ್ಭದಲ್ಲಿ ಐವನ್ ಡಿಸೋಜ ಎಂಬ ಕಾಂಗ್ರೆಸ್ ನಾಯಕರು ಬಾಂಗ್ಲಾ ಪರಿಸ್ಥಿತಿ ದೇಶದಲ್ಲಿ ಆಗುತ್ತದೆ ಎಂಬ ಹೇಳಿಕೆ ನೀಡುತ್ತಾರೆ ಎಂದರೆ ಹೇಗೆ? ಎಂದು ಪ್ರಶ್ನೆ ಮಾಡಿದರು.
ಭಯೋತ್ಪಾದಕರ ದಾಳಿ, ಅಲ್ಪಸಂಖ್ಯಾತರ ತುಷ್ಟಿಕರಣ ನಡೆಯುತ್ತಿದೆ ಎಂದರೆ ಅದಕ್ಕೆ ನೇರ ಕಾರಣ ಕಾಂಗ್ರೆಸ್. ನೆಹರು ಮಾಡಿದ ತಪ್ಪದೇ ಕಾಂಗ್ರೆಸ್ ಮುಂದುವರೆಸಿಕೊಂಡು ಬರುತ್ತಿದೆ. ಅದನ್ನು ತೊಡೆದು ಹಾಕುವ ಕೆಲಸವನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡುತ್ತಿದೆ. ಕಾಂಗ್ರೆಸ್ ಪಕ್ಷದಿಂದ ನೀತಿಪಾಠ ಕಲಿಯುವ ಅವಶ್ಯಕತೆ ನಮಗಿಲ್ಲ ಎಂದು ಹರಿಹಾಯ್ದರು.
ರಾಜ್ಯಪಾಲರ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಈ ಹಿಂದಿನ ಇತಿಹಾಸವನ್ನು ತೆಗೆದು ನೋಡಬೇಕು. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ರಾಜ್ಯಪಾಲರನ್ನು ಅತಿಹೆಚ್ಚು ದುರುಪಯೋಗ ಮಾಡಿಕೊಂಡು ಎಷ್ಟು ಸರ್ಕಾರವನ್ನು ಕಿತ್ತು ಹಾಕಿದ್ದೀರಿ ಎಂಬುದನ್ನು ನೋಡಬೇಕು. ರಾಜ್ಯಪಾಲರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ ಎಂದರು.
ಸಿದ್ದರಾಮಯ್ಯ ತಪ್ಪು ಮಾಡದೇ ಹೋದಲ್ಲಿ ಯಾಕೆ ಭಯಪಡಬೇಕು. ಈ ಹಿಂದೆಯೇ ಸದನದಲ್ಲಿ ಈ ಬಗ್ಗೆ ಉತ್ತರ ಕೊಟ್ಟಿದ್ದರೇ ಸತ್ಯಾಸತ್ಯತೆ ಅಂದೇ ಹೊರಗಡೆ ಬರುತ್ತಿತ್ತು. ಆದರೆ ನೀವು ಸುಮ್ಮನೆ ಇರೋದು ನೋಡಿದಾಗ ಇದರಲ್ಲಿ ಸಿಎಂ ಭಾಗಿಯಾಗಿದ್ದು ಸ್ಪಷ್ಟವಾಗುತ್ತದೆ. ಅದನ್ನು ಮರೆಮಾಚಲು ಬೇರೆ ಬೇರೆ ಹೇಳಿಕೆ ಕೊಡುವ ಕೆಲಸ ಇದೀಗ ನಡೆಯುತ್ತಿದೆ. ದೇಶ ವಿಭಜನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡಬಾರದು ಎಂದು ಕಿಡಿಕಾರಿದರು.
ನಮಗೆ ಸಿಎಂ ಬಗ್ಗೆ ಯಾವುದೇ ಹೊಟ್ಟೆ ಕಿಚ್ಚು ಇಲ್ಲ. ಕಾಂಗ್ರೆಸ್ ಗ್ಯಾರಂಟಿಯನ್ನು ಸ್ವಾಗತ ಮಾಡಿದ್ದೇವೆ. ಇದೀಗ ಸಿಎಂ ನಿಷ್ಪಕ್ಷಪಾತ ಇದ್ದರೆ ಸರಿಯಾದ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ನಡೆದ ಹಗರಣಗಳನ್ನು ರಾಜ್ಯ ಸರ್ಕಾರ ಸಿಬಿಐಗೆ ಕೊಡಬೇಕು. ಈ ಮೂಲಕ ಎಲ್ಲವೂ ಬಹಿರಂಗ ಬರುತ್ತದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ನಾವು ಹಿಂದಿನ ಬಾಗಿಲಿನಿಂದ ಸರ್ಕಾರ ರಚಿಸುವ ಪ್ರಶ್ನೆ ಇಲ್ಲ ಎಂದು ಮಹೇಶ ಟೆಂಗಿನಕಾಯಿ ಹೇಳಿದರು.