*ತುಮಕೂರಿನಲ್ಲಿ ಈ ವರ್ಷದ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ. 92ರಷ್ಟು ಹೆಚ್ಚಿನ ಮಳೆಯಾಗಿದೆ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.
ನಗರದ ಅಮಾನಿಕೆರೆ ಬಾಗಿನ ಅರ್ಪಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಮಾನ್ಯ ಮುಂಗಾರಿನಂತೆ ಕಾಣಿಸುತ್ತಿದೆ. ಮುಂಗಾರಿನಲ್ಲಿ ವಾಡಿಕೆ ಪ್ರಕಾರ 302 ಮಿ.ಮೀ ಮಳೆಯನ್ನು ನಿರೀಕ್ಷಿಸಲಾಗಿತ್ತು. ಮುಂಗಾರು ಆರಂಭವಾದಾಗಿನಿಂದ ಈವರೆಗೆ ಜಿಲ್ಲೆಯಲ್ಲಿ 592 ಮಿ.ಮೀ ಮಳೆಯಾಗಿದೆ. ಶೇ. 92ರಷ್ಟು ಹೆಚ್ಚು ಮಳೆ ಬಿದ್ದಿದೆ ಎಂದರು.
ಜಿಲ್ಲೆಯಲ್ಲಿ ಅನೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ತುಮಕೂರು ನಗರದ ಅಮಾನಿ ಕೆರೆ ತುಂಬುವುದೇ ಬಹಳ ವಿರಳ. ಕಳೆದ ವರ್ಷ ಹೆಚ್ಚು ಬರಗಾಲವಿದ್ದ ಪರಿಣಾಮ ಕೆರೆಗೆ ನೀರು ಬರಲಿಲ್ಲ. ಆದಾಗ್ಯೂ ಇದ್ದ ನೀರನ್ನು ರಕ್ಷಸಿಕೊಂಡು ಬಂದಿದ್ದೇವೆ. ಕೆರೆಯ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.
ಸೇತುವೆ ನೀರ್ಮಾಣ ಕಾಮಗಾರಿ ಪೂಋಣಗೊಳಿಸುವ ಬಗ್ಗೆ ಗುತ್ತಿಗೆದಾರರೊಂದಿಗೆ ಮಾತನಾಡಿದ್ದೇನೆ. ಸೆಪ್ಟೆಂಬರ್‌ನೊಳಗೆ ಮುಗಿಸಿ ಕೊಡುತ್ತಾರೆ. ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು. ಎಸ್ ಮಾಲ್‌ನವರು ರಾಜಗಾಲುವೆ ಒತ್ತುವರಿ ಮಾಡಿರುವ ಬಗ್ಗೆ ಪರಿಶೀಲನೆ ಮಾಡುತ್ತೇವೆ. ಸರ್ವೇ ಮಾಡಿಸಿ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಜಂತ್‌ಕಲ್ ಮೈನಿಂಗ್ ವಿಚಾರದಲ್ಲಿ ಸಹಿ ಫೋರ್ಜರಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಹಿ ಫೋರ್ಜರಿಯಾಗಿದೆ ಎಂಬುದರ ಕುರಿತು ಕುಮಾರಸ್ವಾಮಿ ಅವರುವದೂರು ಕೊಟ್ಟರೆ ಪರಿಶೀಲಿಸಿ, ಕ್ರಮ ಕೈಗೊಳ್ಳುತ್ತೇವೆ. ದ್ವೇಷದ ರಾಜಕಾರಣ ಮಾಡುವುದಿಲ್ಲ. ಕಾನೂನು ಮೀರಿ ಏನನ್ನು ಮಾಡಿಲ್ಲ. ಬಿಜೆಪಿಯವರು ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬುದರ ಕುರಿತು ನನಗಾಗಲಿ ಅಥವಾ ಡಿಜಿ ಅವರ ಗಮನಕ್ಕಾಗಲಿ ಬಂದಿಲ್ಲ. ರಾಜ್ಯಪಾಲರಿಗೆ ಬುಲೆಟ್ ಪ್ರೂಫ್ ಕಾರು ಕೊಟ್ಟಿರುವ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಕೇಂದ್ರದ ಭದ್ರತಾ ವ್ಯವಸ್ಥೆ ಪ್ರಕಾರ ನೀಡಿರಬಹುದು ಎಂದರು.
ಕಾನೂನಿಗಿಂತ ಯಾರು ದೊಡ್ಡವರಿಲ್ಲ. ಕಾನೂನಿಗೆ ಗೌರವ ಕೊಡುತ್ತಿರುವುದರಿಂದಲೇ ಇನ್ನು ನಾವೆಲ್ಲ ಇದ್ದೇವೆ. ಪ್ರಜಾಪ್ರಭುತ್ವ ಉಳಿಯಬೇಕಾದರೆ ಕಾನೂನಿಗೆ ಗೌರವ ನೀಡಬೇಕು ಎಂದು ಹೇಳಿದರು.