ಕೋಲ್ಕತ್ತಾ:ಕೋಲ್ಕತ್ತಾ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖಾಧಿಕಾರಿಗಳು ಶಂಕಿತ ವ್ಯಕ್ತಿ ಮಧ್ಯರಾತ್ರಿಯ ಒಂದು ಗಂಟೆಯ ನಂತರ ಆಸ್ಪತ್ರೆಗೆ ಪ್ರವೇಶಿಸಿದ ಸಿಸಿಟಿವಿ ದೃಶಯವನ್ನು ಬಿಡುಗಡೆ ಮಾಡಿದೆ.

ಶಂಕಿತ ವ್ಯಕ್ತಿಯ ಕುತ್ತಿಗೆಗೆ ಬ್ಲೂಟೂತ್ ಇಯರ್‌ಫೋನ್ ಸುತ್ತಿಕೊಂಡಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ತೋರಿಸುತ್ತಿವೆ. ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ಮಹಿಳೆಯ ಶವ ಪತ್ತೆಯಾದ ನಂತರ ಪ್ರಾಥಮಿಕ ತನಿಖೆಯಲ್ಲಿ ಅಪರಾಧ ನಡೆದ ಸ್ಥಳದಲ್ಲಿ ಬ್ಲೂಟೂತ್ ಇಯರ್‌ಫೋನ್‌ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದರು .

ಸಂಜಯ್ ರಾಯ್ ಮುಂಜಾನೆ 1.03 ಗಂಟೆಗೆ ಆಸ್ಪತ್ರೆಗೆ ಪ್ರವೇಶಿಸುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿ ತೋರಿಸುತ್ತದೆ ಎಂದು ಮೂಲಗಳು ತಿಳಿಸಿವೆ. ವಿಚಾರಣೆ ವೇಳೆ ಪೊಲೀಸರು ಆತನಿಗೆ ಸಿಸಿಟಿವಿ ಸಾಕ್ಷ್ಯವನ್ನು ತೋರಿಸಿದ್ದು, ನಂತರ ಸಂಜಯ್ ರಾಯ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆಯಾದ ರಾತ್ರಿ 1.03 ಗಂಟೆಗೆ ಆಸ್ಪತ್ರೆ ತಲುಪುವ ಮುನ್ನ ಸಂಜಯ್ ರಾಯ್ ಕೋಲ್ಕತ್ತಾದ ಎರಡು ವೇಶ್ಯಾಗೃಹಗಳಿಗೆ ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವನು ಆಗಸ್ಟ್ 8 ರಂದು ರಾತ್ರಿ ರೆಡ್ ಲೈಟ್ ಏರಿಯಾ ಸೋನಾಗಚಿಗೆ ಹೋಗಿ ಮದ್ಯ ಸೇವಿಸಿ ಎರಡು ವೇಶ್ಯಾಗೃಹಗಳಿಗೆ ಒಂದರ ನಂತರ ಒಂದರಂತೆ ಭೇಟಿ ನೀಡಿದ್ದನು ಎಂದು ಮೂಲಗಳು ತಿಳಿಸಿವೆ.

ನಂತರ ಅವನು ಮಧ್ಯರಾತ್ರಿಯ ನಂತರ ಆಸ್ಪತ್ರೆಗೆ ಹೋದನು. ಈ ವೇಳೆ ಅವನು ಸೆಮಿನಾರ್ ಹಾಲ್‌ಗೆ ಪ್ರವೇಶಿಸುವುದು ಮತ್ತು ಹೊರಹೋಗುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಅಲ್ಲಿ ಜೂನಿಯರ್ ವೈದ್ಯರು ಮಲಗಿದ್ದರು.

ಈ ಪ್ರಕರಣ ದೇಶಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ವಿಶೇಷವಾಗಿ ಕೋಲ್ಕತ್ತಾದಲ್ಲಿ ಪ್ರತಿಭಟನೆಗಳು ತೀವ್ರವಾಗಿವೆ.

ಕೋಲ್ಕತ್ತಾದ ವಿಶೇಷ ನ್ಯಾಯಾಲಯ ಸಂಜಯ್ ರಾಯ್ ಅವರ ಪಾಲಿಗ್ರಾಫ್ ಪರೀಕ್ಷೆಗೆ ನಿನ್ನೆ ಅನುಮತಿ ನೀಡಿತ್ತು. ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಲ್ವರು ವೈದ್ಯರಿಗೆ ಆಗಸ್ಟ್ 8-9ರ ಮಧ್ಯರಾತ್ರಿಯಲ್ಲಿ ಸುಳ್ಳು ಪತ್ತೆ ಪರೀಕ್ಷೆ ನಡೆಸಲು ನ್ಯಾಯಾಲಯ ಈಗಾಗಲೇ ಅನುಮತಿ ನೀಡಿದೆ.

Leave a Reply

Your email address will not be published. Required fields are marked *