ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಕಾನೂನು ಸಲಹೆಗಾರರನ್ನಾಗಿ ಶಾಸಕ ಎಎಸ್ ಪೊನ್ನಣ್ಣ ನೇಮಕ ಮಾಡಲಾಗಿದೆ.

ಹೌದು, ಈ ಕುರಿತಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸಿಎಂ ಸಿದ್ಧರಾಮಯ್ಯ ಟಿಪ್ಪಣಿ ಹೊರಡಿಸಿದ್ದಾರೆ.

ಟಿಪ್ಪಣಿಯಲ್ಲಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದಂತ ಎಎಸ್ ಪೊನ್ನಣ್ಣ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನನ್ನ ಕಾನೂನು ಸಲಹೆಗಾರರನ್ನಾಗಿ ನೇಮಿಸಿ ಸಂಪುಟ ದರ್ಜೆಯ ಸಚಿವ ಸ್ಥಾನಮಾನದೊಂದಿಗೆ, ಲಭ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಆದೇಶದಲ್ಲಿ ಸೂಚಿಸಿದ್ದಾರೆ.

ಇದಕ್ಕೂ ಮುನ್ನ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿ ಪರಿಷತ್ ಸದಸ್ಯ ಗೋವಿಂದರಾಜ್ ಹಾಗೂ ನಜೀರ್ ಅಹ್ಮದ್ ಅವರನ್ನು ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು.

ಕರ್ನಾಟಕ ಕಂಡ ಹಿರಿಯ ಸಾಹಿತಿ ಎ ಕೆ ಸುಬ್ಬಯ್ಯ ಹಾಗೂ ಅಜ್ಜಿಕುಟೀರ ಪೊನ್ನಮ್ಮ ಸುಬ್ಬಯ್ಯ ಅವರ ಪುತ್ರ ಎ‌ಎಸ್ ಪೊನ್ನಪ್ಪ ಅವರು 1974 ಜುಲೈ 9 ರಂದು ಕೊಡಗು ಜಿಲ್ಲೆಯ ವಿರಾಜಪೇಟೆ ಯಲ್ಲಿ ಜನಿಸಿದರು. ಬಾಲ್ಯದ ಪ್ರಾಥಮಿಕ ಶಿಕ್ಷಣವನ್ನು ಅಲ್ಲೇ ಮುಗಿಸಿದರು‌. ನಂತರ ಸರ್ಕಾರಿ ಕಾಲೇಜಿನಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿಸಿ. 1997ರಲ್ಲಿ ಬೆಂಗಳೂರಿನ ಹೈಕೋರ್ಟ್ ನಲ್ಲಿ ಕಾನೂನು ಅಭ್ಯಾಸದಲ್ಲಿ ತೊಡಗಿದರು.

2013ರಲ್ಲಿ ಸರ್ಕಾರದ ಮುಖ್ಯ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಅವರು, 2014ರ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದ್ದರು.

ಸಮಿಶ್ರ ಸರ್ಕಾರದಲ್ಲೂ ಕೂಡ ಪೊನ್ನಣ್ಣ ಆವರು ಹೆಚ್ಚುವರಿ ಅಡ್ವಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸಿದರು‌. ನಂತರ 202೦ರಲ್ಲಿ ಪೊನ್ನಣ್ಣ ಅವರಿಗಿರುವ ಅನುಭವ, ತಿಳಿವಳಿಕೆ ಹಾಗೂ ವಿಷಯವನ್ನು ಸಮರ್ಥವಾಗಿ ಮಂಡಿಸುವ ಸಾಮರ್ಥ್ಯ ಪರಿಗಣಿಸಿ, ಕೆಪಿಸಿಸಿ ವಕ್ತಾರರಾಗಿ ನೇಮಕ ಮಾಡಲಾಯ್ತು.

ಈಗ 2023 ಚುನಾವಣೆಯಲ್ಲಿ ಎ.ಎಸ್ ಪೊನ್ನಣ್ಣ ಅವರು ವಿರಾಜಪೇಟೆಯ ಶಾಸಕರಾಗಿಯೂ ಆಯ್ಕೆಯಾದರು. ಈಗ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಪೊನ್ನಣ್ಣ ಅವರನ್ನು ಮುಖ್ಯಮಂತ್ರಿ ಕಾನೂನು ಸಲಹೆಗಾರರಾಗಿ ನೇಮಕ ಮಾಡಲಾಗಿದೆ.

Leave a Reply

Your email address will not be published. Required fields are marked *