ಬೆಂಗಳೂರು: ರಾಜ್ಯ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಮನೆಯ ಯಜಮಾನಿಯರಿಗೆ ಪ್ರತಿ ತಿಂಗಳು ನೀಡುತ್ತಿರುವ ‘ಗೃಹಲಕ್ಷ್ಮೀ’ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿರುವ ಅಜ್ಜಿಯ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ‘ಗೃಹಲಕ್ಷ್ಮೀ’ ಜಾರಿಗೆ ತಂದಿದ್ದು ಸಾರ್ಥಕವಾಗುತ್ತಿದೆ ಎಂದು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ  ಅಕ್ಕಾತಾಯಿ ಲಂಗೋಟಿ ಎಂಬ ಅಜ್ಜಿ ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹಬ್ಬದ ಊಟ ಹಾಕಿಸಿದ್ದಾರೆ. ಅಜ್ಜಿಯ ಈ ನಡೆಗೆ ರಾಜ್ಯದೆಲ್ಲೆಡೆಯಿಂದ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಅಜ್ಜಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.

ಗೃಹಲಕ್ಷ್ಮೀ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿರುವ ಅಜ್ಜಿ  ಅಕ್ಕಾತಾಯಿ ಲಂಗೋಟಿ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ದೂರವಾಣಿ ಮೂಲಕ ಸಂಪರ್ಕಿಸಿ; ಹರ್ಷ ವ್ಯಕ್ತಪಡಿಸಿದ್ದಾರೆ. ದೂರವಾಣಿಯಲ್ಲಿ ಅಜ್ಜಿಯೊಂದಿಗೆ ಬಹಳ ಹೊತ್ತು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಅತ್ಯಂತ ಗೌರವ ಮತ್ತು ಸಂಯಮದಿಂದ, ಬೆಳಗಾವಿ ಶೈಲಿಯಲ್ಲೇ ಮಾತನಾಡಿದರು.

ಈಗ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ್ದಿ; ನಿನ್ನ ಮಗಳಾದ ನನಗೆ ಯಾವಾಗ ಊಟ ಹಾಕಿಸುತ್ತೀ ಎನ್ನುವ ಸಚಿವರ ಪ್ರಶ್ನೆಗೆ, ಜರೂರೇ ಬಾ ನಿನಗೂ ಊಟ ಹಾಕಿಸ್ತೀನಿ; ನೀನೇ ನಮಗೆಲ್ಲ ಗೃಹಲಕ್ಷ್ಮೀ ಹಣ ಕೊಡುವ ಮನೆ ಮಗಳು.. ನಿನಗೆ ಇಲ್ಲ ಎನ್ನಲಾಗುವುದೇ ಎಂದರು ಅಜ್ಜಿ.
ಅಜ್ಜಿ ಮಾತುಗಳಿಂದ ಬಹಳ ಸಂತಸಗೊಂಡ ಸಚಿವರು; ನಿನಗೊಂದು ರೇಷ್ಮೆ ಸೀರೆ ಕಳುಹಿಸಿರುವುದಾಗಿ ಅಜ್ಜಿಗೆ ತಿಳಿಸಿದರು.

ಗೃಹಲಕ್ಷ್ಮೀ ಯೋಜನೆ ನಿಮ್ಮಂತವರ ಮನೆಗೆ ತಲುಪುತ್ತಿರುವುದರಿಂದ ಏನೆಲ್ಲ ಅನುಕೂಲವಾಗುತ್ತಿದೆ ಎಂದು ತಿಳಿದು ಸಂತಸವಾಗುತ್ತಿದೆ;  ಬಡ ಜನರ ಬದುಕಿಗೆ ನೆರವಾಗಬೇಕು; ನೊಂದವರ ಬಾಳಲ್ಲಿ ನೆಮ್ಮದಿ ಮೂಡಿಸಬೇಕು ಎಂಬ ತಮ್ಮ ಸರ್ಕಾರದ ಉದ್ದೇಶವನ್ನು ಗೃಹಲಕ್ಷ್ಮೀ ಯೋಜನೆ ಈಡೇರಿಸುತ್ತಿದೆ.

ಯೋಜನೆ ಜಾರಿಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಸಚಿವರು ಹೇಳಿದರು. ತಮ್ಮ ಸಾರ್ವಜನಿಕ ಸಂಪರ್ಕ ಅಧಿಕಾರಿ ಮೂಲಕ ಸಚಿವರು ಅಜ್ಜಿಗೆ ರೇಶ್ಮೆ ಸೀರೆ ಮತ್ತು ಹೋಳಿಗೆ ಕಳುಹಿಸಿ ಕೊಟ್ಟಿದ್ದು, ಅಜ್ಜಿಗೆ ಶಾಲು ಹೊದೆಸಿ ಸನ್ಮಾನಿಸಲಾಯಿತು.

Leave a Reply

Your email address will not be published. Required fields are marked *