ಬೆಂಗಳೂರು: ವೈಟ್ನರ್ ಬಳಿದಿದ್ದ ದಾಖಲೆಗಳಿಗೆ ಟಾರ್ಚ್ ಹಾಕಿ ತೋರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು; ಶಿಶುಪಾಲನ ಹಾಗೆ ತಪ್ಪಿನ ತಪ್ಪು ಮಾಡುತ್ತಿದ್ದೀರಿ ಚಾಟಿ ಬೀಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ನೀಡಿರುವ ಅವರು; ವೈಟ್ನರ್ ಅಡಿಯಲ್ಲಿ ಅಡಗಿಸಿಟ್ಟಿದ್ದ ಅಕ್ಷರಗಳಿಗೆ ಟಾರ್ಚ್ ಹಾಕಿ ತಡಕಾಡುತ್ತಿರುವುದು ಈ ರಾಜ್ಯದ ಘನತೆವೆತ್ತ ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ ಎಂದು ಕಟುವಾಗಿ ಟೀಕಿಸಿದ್ದಾರೆ.

ಇದು ಮೂಲ ದಾಖಲೆ, ಮೂಡಾದಲ್ಲಿದೆ. ನಿಮ್ಮ ಬಳಿಗೆ ಹೇಗೆ ಬಂತು? ನಿಮಗೆ ಈ ಮೂಲ‌ ದಾಖಲೆ ತಂದು ಕೊಟ್ಟ ಮಹಾಶಯರು ಯಾರು? ಇಷ್ಟಕ್ಕೂ ಈ ಮೂಲ ದಾಖಲೆ ಮೂಡಾದಲ್ಲಿದೆಯಾ? ಅಥವಾ ನಿಮ್ಮ ಮನೆಯಲ್ಲಿದೆಯಾ? ಈ ಮೂಲ ದಾಖಲೆಗೆ ಟಾರ್ಚ್ ಹಾಕಿದವರು ಯಾರು? ನೀವಾ..? ಅಥವಾ ಇನ್ನಾರಾದರೂ ಇದ್ದಾರಾ? ಎಂದು ಪ್ರಶ್ನಿಸಿದ್ದಾರೆ ಅವರು.

ನನ್ನ ಪ್ರಶ್ನೆ ಇಷ್ಟೇ, ಈ ದಾಖಲೆಯನ್ನೇಕೆ ನೀವು ಕೋರ್ಟ್‌ಗೆ ಕೊಟ್ಟಿಲ್ಲ!? ನ್ಯಾಯಾಲಯವನ್ನೂ ದಾರಿ ತಪ್ಪಿಸುತ್ತಿದ್ದೀರಿ. ಜನರನ್ನು ದಿಕ್ಕು ತಪ್ಪಿಸಿದ ಹಾಗೇ ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ಕೊಟ್ಟು ಅಲ್ಲಿಯೂ ಟಾರ್ಚ್ ಬಿಟ್ಟು ತೋರಿಸುತ್ತೀರಾ.., ಹೇಗೆ? ಎಂದು ಸಿಎಂ ಅವರ ಕಾಲೆಳೆದಿದ್ದಾರೆ ಸಚಿವರು.

ತಪ್ಪಿನ ಮೇಲೆ ತಪ್ಪು ಮಾಡುತ್ತಿದ್ದೀರಿ.. ಶಿಶುಪಾಲನ ಹಾಗೆ!! ಮಾಡಿದ ತಪ್ಪು ಮುಚ್ಚಿಕೊಳ್ಳಲು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೀರಿ ಎಂದು ಕಟುವಾಗಿ ಟೀಕಿಸಿದ್ದಾರೆ ಅವರು.

Leave a Reply

Your email address will not be published. Required fields are marked *