ಬೆಳಗಾವಿ, ಆಗಸ್ಟ್ 26 :ಪ್ರಾಮಾಣಿಕ ಜನರು ನನಗೆ ಶ್ರೇಯಸ್ಸು ಯಶಸ್ಸು ಕೋರಿದರೆ ನನಗಿರುವ ರಾಜಕೀಯ ವೈರಿಗಳು , ನನ್ನ ರಾಜಕೀಯ ಜೀವನಕ್ಕೆ ಸದಾ ಮಸಿಬಳಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಿಳಿಸಿದರು..
ಕೆಲವರಂತು ಮುಖ್ಯಮಂತ್ರಿಗಳನ್ನು ರಾಜಕೀಯದ ಸುಳಿಯಲ್ಲಿ ಸಿಲುಕಿಸಲು ಯಾವಾಗಲೂ ಪ್ರಯತ್ನಿಸುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದರು.
ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ನಿವೇಶನ ಪಡೆದಿರುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿರುವ ಬಗ್ಗೆಯೂ ಸಿದ್ಧರಾಮಯ್ಯನವರು ಉತ್ತರಿಸುತ್ತಾ, ಕುಮಾರಸ್ವಾಮಿಯಂತಹ ಸುಳ್ಳು ಹೇಳುವ ಕೆಟ್ಟ ವ್ಯಕ್ತಿಯು ಇಡೀ ದೇಶದಲ್ಲಿ ಮತ್ತೊಬ್ಬರಿಲ್ಲ. ಶ್ರೀ ದೇವರಾಜು ರವರಿಂದ ನನ್ನ ಬಾಮೈದುನ 2004 ರಲ್ಲಿ ಜಮೀನನ್ನು ಪಡೆದಿದುಕೊಂಡಿದ್ದು 2005 ರಲ್ಲಿ ಅದನ್ನು ಪರಿವರ್ತಿಸಲಾಗಿ, 2010 ರಲ್ಲಿ ಅವರಿಂದ ನನ್ನ ಪತ್ನಿಗೆ ಆ ಜಮೀನನ್ನು ದಾನವಾಗಿ ನೀಡಲಾಗಿದೆ. ಆದರೆ ಮುಡಾ ದವರು ನನ್ನ ಪತ್ನಿಯ ಗಮನಕ್ಕೆ ತಾರದೇ ಆ ಜಮೀನನ್ನು ನಿವೇಶನವಾಗಿ ಪರಿವರ್ತಿಸಿ ಹಂಚಿಕೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಿಜೆಪಿಯವರೇ ಮುಡಾ ಅಧ್ಯಕ್ಷರಾಗಿದ್ದದ್ದು.
ಈ ಹಂಚಿಕೆ ಕಾನೂನು ರೀತಿ ಇದೆಯೇ , ಇಲ್ಲವೇ ಎಂದು ಪರಿಶೀಲಿಸುವ ಜವಾಬ್ದಾರಿಯೂ ಅವರದೇ ಆಗಿದೆ. ಇದರಲ್ಲಿ ಎಲ್ಲವೂ ಕಾನೂನಾತ್ಮಕವಾಗಿ ಸರಿಯಿದೆ ಎಂಬುದು ನಮ್ಮ ಭಾವನೆ. ನಮ್ಮ ಭಾಗದ 3 ಎಕರೆ 16 ಗುಂಟೆ ಜಮೀನು ಹೋಗಿದ್ದು, ನಮ್ಮ ಗಮನಕ್ಕೆ ತಾರದೇ ನಿವೇಶನ ಮಾಡಿ ಹಂಚಿದರೆ ನಾವೇನು ಮಾಡಬೇಕು ಎಂದು ಮುಖ್ಯಮಂತ್ರಿಗಳು ಮರುಪ್ರಶ್ನಿಸಿದರು.
ನನ್ನ ವಿರುದ್ಧ ದಾಖಲೆಗಳಿದ್ದರೆ ಸಲ್ಲಿಸಲಿ ಅಲ್ಲದೇ
ಈ ಜಮೀನು ಕುಮಾರಸ್ವಾಮಿಯವರಿಗೆ ಸೇರಿದ್ದಲ್ಲ. ಆದರೆ ಈ ಬಗ್ಗೆ ಅವರೇಕೆ ಸುಳ್ಳು ಹೇಳಬೇಕು ? ಈ ಬಗ್ಗೆ ಸರ್ಕಾರ ಒಂದು ವಿಶೇಷ ತನಿಖಾ ಆಯೋಗವನ್ನು ರಚಿಸಿದ್ದು, ಕುಮಾರಸ್ವಾಮಿಯವರ ಬಳಿ ಈ ಬಗ್ಗೆ ದಾಖಲೆಗಳೇನಾದರೂ ಇದ್ದರೆ ಅವರು ಸಲ್ಲಿಸಲಿ ಎಂದರು.
ಕುಮಾರಸ್ವಾಮಿಯವರ ಯಾವುದೇ ಆರೋಪ ತಾರ್ಕಿಕ ಅಂತ್ಯ ಕಂಡಿಲ್ಲ
ನೂರು ಸಿದ್ದರಾಮಯ್ಯನವರು ಬಂದರೂ, ನನ್ನನ್ನು ಜೈಲಿಗೆ ಕಳಿಸಲು ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾತನಾಡಿ, ಕುಮಾರಸ್ವಾಮಿಯವರನ್ನು ನಾನು ಜೈಲಿಗೆ ಕಳಿಸುತ್ತೇನೆ ಎಂದು ನಾನು ಹೇಳಿರುವುದಿಲ್ಲ ಹಾಗೂ ಅಂತಹ ಯಾವುದೇ ಉದ್ದೇಶ ನಮಗಿಲ್ಲ. ಆದರೆ ಕಾನೂನು ಉಲ್ಲಂಘಿಸಿದರೆ , ನ್ಯಾಯಾಲಯವೇ ಜೈಲಿಗೆ ಕಳಿಸುತ್ತದೆ. ಅಂತಹ ಸಂದರ್ಭ ಬಂದಾಗ, ಕುಮಾರಸ್ವಾಮಿಯವರನ್ನು ಬಂಧಿಸಲು ನೂರು ಸಿದ್ದರಾಮಯ್ಯ ಅಲ್ಲ , ಒಬ್ಬ ಪೊಲೀಸ್ ಪೇದೆ ಸಾಕು. ಕುಮಾರಸ್ವಾಮಿಯವರು ಎಂದಿಗೂ ಹಿಟ್ ಅಂಡ್ ರನ್ ಕೇಸ್ ಆಗಿದ್ದು, ಅವರು ಈವರೆಗೆ ಮಾಡಿರುವ ಯಾವುದೇ ಆರೋಪ ತಾರ್ಕಿಕ ಅಂತ್ಯವನ್ನು ಕಂಡಿಲ್ಲ ಎಂದು ತಿಳಿಸಿದರು.
ಹಿರಿಯ ಜೀವ ಅಕ್ಕಾತಾಯಿ ಅವರ ಕಾರ್ಯಕ್ಕೆ ಸಂತಸ
ಬೆಳಗಾವಿ ಜಿಲ್ಲೆಯ ರಾಯಬಾಗ್ ತಾಲ್ಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೂಟಿ ಎಂಬುವರಿಗೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಕಳೆದ ಹತ್ತು ತಿಂಗಳಿನಿಂದ ಮಾಹೆಯಾನ 2,000 ರೂ. ದೊರೆಯುತ್ತಿದೆ. ಅಕ್ಕಾತಾಯಿ ಎಂಬ ಹಿರಿಯ ಮಹಿಳೆ ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಉಳಿತಾಯ ಮಾಡಿ, ಊರಿನ ಜನಕ್ಕೆಲ್ಲ ಹೋಳಿಗೆ ಊಟ ಹಾಕಿದ್ದನ್ನು ಪ್ರಶಂಸಿಸಿದ ಮುಖ್ಯಮಂತ್ರಿಗಳೂ ಹೋಳಿಗೆಯ ರುಚಿಯನ್ನು ಸವಿದರು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರ ಸದಾ ಅಧಿಕಾರದಲ್ಲಿದ್ದು ,ಒಳಿತಾಗಲೆಂದು ಪ್ರಾರ್ಥಿಸಿ ಈ ಕಾರ್ಯ ಮಾಡಿದ್ದಾಗಿ ತಿಳಿದು ಮನತುಂಬಿ ಬಂತು. ಈ ಹಿರಿಯ ಜೀವದ ನಿಸ್ವಾರ್ಥ ಕಾರ್ಯವನ್ನು ಶ್ಲಾಘಿಸಿ, ಅವರಿಗೆ ಸನ್ಮಾನಿಸಿ ಗೌರವ ಸೂಚಿಸಲಾಗಿದೆ ಎಂದರು.ಸಂಗೊಳ್ಳಿಯ ಶಕ್ತಿ ಯೋಜನೆಯ ಫಲಾನುಭವಿಯನ್ನು ಇದೇ ರೀತಿ ಸನ್ಮಾನಿಸಿದ್ದನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಸ್ಮರಿಸಿದರು.
ಕಿತ್ತೂರು ಉತ್ಸವದ ಸಿದ್ದತೆ
ಕಿತ್ತೂರು ಉತ್ಸವ ಆಯೋಜನೆಯ ಬಗ್ಗೆ ಪ್ರತಿಕ್ರಿಯೇ ನೀಡಿ , ಕಿತ್ತೂರು ಉತ್ಸವ ಏರ್ಪಡಿಸಲಾಗಿದ್ದು, ಈ ನಿಟ್ಟಿನಲ್ಲಿ ಸಿದ್ದತೆ ನಡೆದಿರುವುದಾಗಿ ತಿಳಿಸಿದರು.
ರಾಜ್ಯಪಾಲರಿಂದ ವಾಪಸ್ಸು ಬಂದಿರುವ ಬಿಲ್ಲುಗಳ ಬಗ್ಗೆ ಮತ್ತೊಮ್ಮೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.