ಆಗಸ್ಟ್ 30 ರಿಂದ ಸೆಪ್ಟಂಬರ್ 01 ರ ವರೆಗೆ ಅಮೇರಿಕಾದ ವರ್ಜೀನಿಯಾದ ರಿಚ್ಮಂಡ್‌ನಲ್ಲಿ 12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಜರುಗಲಿದ್ದು, ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ.
ಗ್ರೇಟರ್ ರಿಚ್ಮಂಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಸಮ್ಮೇಳನ ನಡೆಯಲಿದ್ದು ಸಭಾಪತಿ ಬಸವರಾಜ ಹೊರಟ್ಟಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅಮೇರಿಕಾ ಸೇರಿದಂತೆ ಸುತ್ತಲಿನ ದೇಶಗಳಲ್ಲಿ ವಾಸಿಸುವ ಕನ್ನಡಿಗರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕನ್ನಡ ನಾಡು, ನುಡಿ, ಭಾಷಾ ಬೆಳವಣಿಗೆ, ಕನ್ನಡದ ಅಸ್ಮಿತೆ, ಕನ್ನಡ ಭಾಷೆಯ ಪ್ರಚಾರಕ್ಕೆ ಕೈಗೊಳ್ಳಬೇಕಾದ ಇಂದಿನ ತುರ್ತು ಅವಶ್ಯಕತೆಗಳು ಸೇರಿದಂತೆ ಹಲವಾರು ಮಹತ್ವದ ವಿಷಯಗಳ ಕುರಿತು ಬಸವರಾಜ ಹೊರಟ್ಟಿ ಅವರು ತಮ್ಮ ನಾಲ್ಕು ದಶಗಳಿಗಿಂತಲೂ ಹೆಚ್ಚು ಕಾಲದ ಅನುಭವ, ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ.
ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಆಗಸ್ಟ್ 28ರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
ಕರ್ನಾಟಕದ ಹೊರಗಡೆಯಿಂದ ನಡೆಯುತ್ತಿರುವ ಅತಿದೊಡ್ಡ ಕನ್ನಡದ ಉತ್ಸವ ಎಂದೇ ಪರಿಗಣಿಸಲಾಗುವ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಈ ಬಾರಿ, ಅಮೇರಿಕಾದ ರಾಜಧಾನಿ ವಾಷಿಂಗ್‌ಟನ್ ಡಿಸಿ ಇಂದ ದಕ್ಷಿಣಾಭಿಮುಖವಾಗಿ ಸುಮಾರು 110 ಮೈಲು ದೂರದಲ್ಲಿರುವ ವರ್ಜೀನಿಯಾ ರಾಜ್ಯದ ರಾಜಧಾನಿಯಾಗಿರುವ ರಿಚ್ಮಂಡ್ ನಗರದಲ್ಲಿ ನಡೆಯಲಿದ್ದು, ಸುಮಾರು 5 ಸಾವಿರಕ್ಕೂ ಹೆಚ್ಚು ಕನ್ನಡಿಗರು ಒಂದೇ ಸೂರಿನಡಿಯಲ್ಲಿ ಸೇರುತ್ತಿರುವುದು ವಿಶೇಷವಾಗಿದೆ.
ಸಮ್ಮೇಳನದಲ್ಲಿ ಕನ್ನಡ ನಾಡು, ನುಡಿ, ರಕ್ಷಣೆ ಕುರಿತು ವಿವಿಧ ಗೋಷ್ಠಿಗಳು, ಚಿಂತನ-ಮಂಥನ, ಸಂವಾದಗಳು ಜರುಗಲಿದ್ದು, ಅತ್ಯುತ್ತಮ ಮನರಂಜನಾ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗಿದೆ. ಕರ್ನಾಟಕದ ವಿವಿಧ ಬಗೆಯ ರುಚಿಕರ ತಿಂಡಿ-ತಿನಿಸುಗಳು, ವಿವಿಧ ವಾಣಿಜ್ಯ ಮತ್ತು ವ್ಯಾಪಾರ ಮೇಳ ಹಾಗೂ ಮಳಿಗೆಗಳು, ಕಲೆ ಮತ್ತು ಸಾಹಿತ್ಯಿಕ ವೇದಿಕೆಗಳು, ಮಹಿಳಾ ವೇದಿಕೆ, ಯುವ ವೇದಿಕೆ, ವಿದ್ಯಾ ಸಂಸ್ಥೆಗಳ ಹಳೇ ವಿದ್ಯಾರ್ಥಿಗಳ ಮಹಾಸಂಗಮ, ವಿವಿಧ ಕ್ರೀಡಾಕೂಟಗಳು, ಆರೋಗ್ಯ ಮತ್ತು ಅಧ್ಯಾತ್ಮಿಕ ವೇದಿಕೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ಈ ಬಾರಿಯ ಅಕ್ಕ ಸಮ್ಮೇಳನದ ವಿಶೇಷ ಆಕರ್ಷಣೆಗಳಾಗಿವೆ.