ತುರುವೇಕೆರೆ: ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 7 ನೇ ವೇತನ ಜಾರಿಗೊಳಿಸಿದ್ದು, ಎಲ್ಲಾ ಸರ್ಕಾರಿ ನೌಕರರಿಗೆ ಅನುಕೂಲವಾಗಿದೆ. ವೇತನ ಜಾರಿಗೆ ಸರ್ಕಾರದೊಂದಿಗೆ ಅವಿರತ ಹೋರಾಟ ನಡೆಸಿದ ರಾಜ್ಯಾಧ್ಯಕ್ಷ ಷಡಕ್ಷರಿ ಅವರಿಗೆ ಅಭಿನಂದನೆ ಸಲ್ಲಿಸಲು ತಾಲ್ಲೂಕು ಸರ್ಕಾರಿ ನೌಕರರ ಸಂಘ ಚೌದ್ರಿ ಕನ್ವೆನ್ಶನ್ ಹಾಲ್ ನಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭಕ್ಕೆ ಬೆರಳೆಣಿಕೆಯಷ್ಟು ನೌಕರರು ಮಾತ್ರ ಹಾಜರಾಗಿದ್ದರು.
ಉಳಿದಂತೆ ಸಭಾಂಗಣದಲ್ಲಿ ಖಾಲಿ ಕುರ್ಚಿಗಳೇ ರಾರಾಜಿಸುತ್ತಿದ್ದವು. ಇದನ್ನು ಕಂಡು ಶಾಸಕ ಎಂ.ಟಿ.ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ಎಂ.ಟಿ.ಕೃಷ್ಣಪ್ಪ, ಸರ್ಕಾರಿ ನೌಕರರೆಲ್ಲರೂ 7 ನೇ ವೇತನ ಆಯೋಗದ ಪ್ರಯೋಜನ ಪಡೆದಿದ್ದೀರಿ. ಇಪ್ಪತ್ತರಿಂದ 50 ಸಾವಿರದವರೆಗೆ ಸಂಬಳವೂ ಹೆಚ್ಚಾಗಿದೆ. ಆದರೆ ಇದಕ್ಕೆ ನಿಮ್ಮೆಲ್ಲರ ಅನುಕೂಲಕ್ಕೆ ರಾಜ್ಯ ಮಟ್ಟದಲ್ಲಿ ಸರ್ಕಾರದೊಂದಿಗೆ ಹೋರಾಟ ನಡೆಸಿದ ಷಡಕ್ಷರಿ ಅವರಿಗೆ ಅಭಿನಂದನೆ ಸಲ್ಲಿಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ ಬೆರಳೆಣಿಕೆಯಷ್ಟು ಸರ್ಕಾರಿ ನೌಕರರು ಬಂದಿರುವುದು ಬಹಳ ನೋವುಂಟು ಮಾಡಿದೆ.
ನಿಮಗಾಗಿ ಹೋರಾಟ ನಡೆಸಿದ ವ್ಯಕ್ತಿಯ ಬಗ್ಗೆ ಅಭಿಮಾನವಿರಬೇಕು. ಅಭಿಮಾನ ಎಲ್ಲಿದೆ. ಮಹಿಳಾ ಶಿಕ್ಷಕರು, ನೌಕರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಬಹುತೇಕ ಮಂದಿ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅನುಕೂಲ ಪಡೆದಿರುವುದು ನೀವು, ನಿಮ್ಮ ಕಾರ್ಯಕ್ರಮಕ್ಕೆ ನೀವೇ ಬರದಿದ್ದರೆ ಮತ್ತಾರು ಬರುತ್ತಾರೆ. 7 ನೇ ವೇತನ ಆಯೋಗದ ಪ್ರಯೋಜನ ಎಲ್ಲಾ ಸರ್ಕಾರಿ ನೌಕರರಿಗೂ ದೊರೆತಿದೆ. ಪ್ರತಿಯೊಬ್ಬರೂ ಈ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು ಎಂದರು